ಧರ್ಮ, ಪೂಜೆ, ಭಕ್ತಿಗಳೆಲ್ಲ ಪ್ರದರ್ಶನದ ವಸ್ತುಗಳಲ್ಲ; ಧರ್ಮವನ್ನು ಕಾಯಬೇಕು: ಡಿ.ಕೆ.ಶಿವಕುಮಾರ್
ಶ್ರೀಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ, ಪುತ್ತಿಗೆಶ್ರೀಗಳ ಜನ್ಮನಕ್ಷತ್ರೋತ್ಸವ ಸಂಭ್ರಮ
ಉಡುಪಿ, ಆ.30: ಧರ್ಮ, ಪೂಜೆ, ಭಕ್ತಿಗಳೆಲ್ಲವೂ ಪ್ರದರ್ಶನದ ವಸ್ತುಗಳಲ್ಲ. ಆಚಾರ-ವಿಚಾರಗಳನ್ನು ಎಲ್ಲರೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ನಾವು ಧರ್ಮವನ್ನು ಕಾಯಬೇಕು, ಧರ್ಮವನ್ನು ಉಳಿಸಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಇಂದು ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪರ್ಯಾಯ ಶ್ರೀಗಳಾದ ಶ್ರೀಸುಗುಣೇಂದ್ರತೀರ್ಥರ 64ನೇಯ ಜನ್ಮ ನಕ್ಷತ್ರೋತ್ಸವದ ಸಂಭ್ರಮ, ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಜಗದ್ಗುರು ಶ್ರೀಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಇಲಾಖೆ ಹೊರತಂದ ಅಂಚೆ ಚೀಟಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಡಿ.ಕೆ.ಶಿವಕುಮಾರ್ ತಾನು ನಾಡಿನ ಪ್ರಮುಖ ರಾಜಕಾರಣಿ ಎಂಬುದನ್ನು ಮರೆತವರಂತೆ, ಆಧ್ಯಾತ್ಮಿಕತೆಯ ಗುಂಗಿ ನಲ್ಲಿ ಒಬ್ಬ ತತ್ವಜ್ಞಾನಿಯಂತೆ, ದಾರ್ಶನಿಕನಂತೆ ಮಾತನಾಡಿದರು. ಮಾತಿನ ಮಧ್ಯದಲ್ಲಿ ಸಂಸ್ಕೃತ ಶ್ಲೋಕಗಳನ್ನು ಪಠಿಸಿದರು. ಉದ್ದದ ಸಂಸ್ಕೃತ ಶ್ಲೋಕವೊಂದನ್ನು ಹೇಳಿ, 55 ವರ್ಷಗಳ ಹಿಂದೆ ಕಲಿತಿದ್ದು, ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿ ಎಂದು ವೇದಿಕೆಯಲ್ಲಿ ಪುತ್ತಿಗೆಶ್ರೀಗಳು ಸೇರಿದಂತೆ ಮೂವರು ಸ್ವಾಮೀಜಿಗಳನ್ನು ಕೇಳಿದರು.
‘ಇಂದಿನ ದಿನಗಳಲ್ಲಿ ನಾನು ಏನೇ ಮಾತನಾಡಿದರೂ ತಪ್ಪು ಕಂಡು ಹಿಡಿಯುವವರು ಜಾಸ್ತಿಯಾಗಿದ್ದಾರೆ. ಕೃಷ್ಣ... ನನ್ನಿಂದ ಇಂದು ಯಾವುದೇ ತಪ್ಪು ಮಾತುಗಳನ್ನು ಆಡಿಸಬೇಡಪ್ಪ’ ಎಂದು ಡಿಕೆಶಿ ಭಾಷಣದ ಪ್ರಾರಂಭದಲ್ಲೇ ಹೇಳಿಕೊಂಡರು. ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ‘ಇದು ಭಾಗ್ಯ.. ಇದು ಭಾಗ್ಯ.. ನನ್ನ ಭಾಗ್ಯ..’ ಎಂದರು.
ಧರ್ಮ ಎಂಬುದು ಮನುಷ್ಯನಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.ಧರ್ಮ ಯಾವುದಾದರೂ ತತ್ವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಶ್ರೀಕೃಷ್ಣ ಒಬ್ಬ ಶಿಕ್ಷಕ, ಚಿಂತಕ, ಮಾರ್ಗದರ್ಶಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ ಎಲ್ಲವೂ ಆಗಿದ್ದಾನೆ ಎಂದು ಶಿವಕುಮಾರ್ ನುಡಿದರು.
ಜೀವನದಲ್ಲಿ ಯಶಸ್ವಿಯಾಗಲು ಕೃಷ್ಣ ತಂತ್ರವೂ ಬೇಕು ಎಂದು ವೇದಿಕೆಯಲ್ಲಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರತ್ತ ನೋಡಿ ಹೇಳಿದ ಡಿಕೆಶಿ, ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದರು.
ದೇವರಲ್ಲಿ ಕಷ್ಟಸುಖದ ಪ್ರಾರ್ಥನೆ ಮಾಡುತ್ತೇವೆ. ಸೋಲು ಮರೆತು ಗೆಲುವಿಗಾಗಿ ಪ್ರಾರ್ಥನೆ ಮಾಡಬೇಕು. ದೇವರು ವರ-ಶಾಪ ಕೊಡುವುದಿಲ್ಲ. ನಿಮಗೆ ಅವಕಾಶವನ್ನು ಕೊಡುತ್ತಾನೆ. ನಾವು ಧರ್ಮವನ್ನು ಕಾಯಬೇಕು, ಧರ್ಮವನ್ನು ಉಳಿಸಬೇಕು. ದೈವ ಧರ್ಮದ ಪರ ನಿಂತು ಎರಡನ್ನೂ ಉಳಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಲಯ ಪ್ರಧಾನ ಪೋಸ್ಟ್‌ಮಾಸ್ಟರ್ ಜನರಲ್ ಕೆ.ಪ್ರಕಾಶ್ ಅವರು ಶ್ರೀಮಧ್ವಾಚಾರ್ಯರ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಪ್ರಾಸ್ತಾವಿಕವಾಗಿ ಮಾತನಾಡಿ ಅನುಗ್ರಹ ಸಂದೇಶ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಆಶೀರ್ವಚನ ನೀಡಿದರು. ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಆಫ್ರಿಕನ್ ವಿವಿ ಉಪಕುಲಪತಿ ಡಾ.ಕೆ.ರವಿ ಆಚಾರ್ಯ, ಬೆಂಗಳೂರಿನ ಡಾ.ಮಹಾಂತೇಶ್ ಆರ್.ಚರಂತಿಮಠ, ಶತಾವಧಾನಿ ಡಾ.ಉಡುಪಿ ರಾಮನಾಥ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ವಿದ್ವಾನ್ ಗುರುರಾಜಾಚಾರ್ ಜೋಶಿ ಅವರನ್ನು ಪುತ್ತಿಗೆಶ್ರೀಗಳು ಸನ್ಮಾನಿಸಿದರು. ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಅಂಚೆ ಇಲಾಖೆಯ ಪೂರ್ಣಿಮಾ ಜನಾರ್ದನ್ ಹಾಗೂ ಡಾ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.
ಬಂಡೆ..ಬಂಡೆ..ಬಂಡೆ..
ತನ್ನನ್ನು ಕೆಲವರು ಬಂಡೆಗೆ ಕಲ್ಲಿಗೆ ಹೋಲಿಸಿ ಮಾತನಾಡುತ್ತಿರುವ ಬಗ್ಗೆ ತಮ್ಮ ಭಾಷಣದ ವೇಳೆ ಪ್ರಸ್ತಾಪಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಂಡೆ ಕಲ್ಲು ಪ್ರಕೃತಿ.. ಕಡೆದರೆ ಆಕೃತಿ.. ಪೂಜಿಸಿದರೆ ಸಂಸ್ಕೃತಿ.. ಎಂದರು.
ಈ ಬಂಡೆಯನ್ನು ಹೇಗೆ ಬೇಕಾದರೂ ಉಪಯೋಗಿಸಬಹುದು. ಇದು ಕಲ್ಲೂ ಆಗಬಹುದು.. ಮೆಟ್ಟಿಲೂ ಆಗಬಹುದು. ಇದನ್ನು ಜಲ್ಲಿಕಲ್ಲಾಗಿಯೂ ಬಳಸಬಹುದು... ಅದನ್ನು ವಿಗ್ರಹವಾಗಿ ಕೆತ್ತಿ ಪೂಜಿಸಬಹುದು, ಬಂಡೆಯನ್ನು ಹೇಗೂ ಬಳಸಿಕೊಳ್ಳಬಹುದು ಎಂದರು.