×
Ad

ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ; ಆಂತರಿಕ ದೂರು ಸಮಿತಿ ಕಡ್ಡಾಯ: ಡಾ.ನಾಗಲಕ್ಷ್ಮಿ ಚೌಧರಿ

Update: 2026-05-26 22:11 IST

ಉಡುಪಿ, ಮೇ 26: ಮಹಿಳೆಯರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ, ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಿ, ದೂರುಗಳು ಬಂದಾಗ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಮಹಿಳೆ ಯರಿಗೆ ನ್ಯಾಯ ದೊರಕಿಸಿಕೊಡುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ಸ್ಪಂದನ ಮತ್ತು ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉದ್ಯೋಗಸ್ಥ ಮಹಿಳೆಯರು ತಮ್ಮ ಕಾರ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದಲ್ಲಿ ದೂರು ಗಳನ್ನು ನೀಡಲು ಅನುಕೂಲ ವಾಗುವಂತೆ, ಸರಕಾರದ ಆದೇಶದಂತೆ 10ಕ್ಕಿಂತ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಸಮಿತಿ ಪ್ರತಿ ಮೂರು ತಿಂಗಳಿ ಗೊಮ್ಮೆ ಸಭೆಯನ್ನು ನಡೆಸಬೇಕು ಎಂದರು.

ಆಂತರಿಕ ಸಮಿತಿಯ ಕಾರ್ಯ ನಿರ್ವಹಣೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಈ ಸಮಿತಿಯನ್ನು ರಚಿಸುವುದರೊಂದಿಗೆ ಸಮಿತಿಯ ಅಧ್ಯಕ್ಷರು ಹಾಗೂ ಇತರೆ ಸದಸ್ಯರ ಹೆಸರಗಳನ್ನು ಕಚೇರಿಯ ಫಲಕಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಡಾ.ಚೌಧರಿ ತಿಳಿಸಿದರು.

ಜಿಲ್ಲೆಯಲ್ಲಿ 345 ಸರಕಾರಿ ಕಚೇರಿಗಳು ಹಾಗೂ 444 ಖಾಸಗಿ ಕಚೇರಿಗಳು ಸೇರಿ 789 ಆಂತರಿಕ ದೂರು ಸಮಿತಿ ಗಳ ರಚನೆಯಾಗಿದೆ. ‘ಶಿ ಬಾಕ್ಸ್’ ಪೋರ್ಟಲ್‌ನಲ್ಲಿ 346 ಸಮಿತಿಗಳ ಮಾಹಿತಿಯನ್ನು ನಮೂದಿಸಲಾಗಿದೆ. ಬಾಕಿ ಉಳಿದಿರುವ 443 ಸಮಿತಿಗಳ ಮಾಹಿತಿಯನ್ನು ಇಂಡೀಕರಿಸುವಂತೆ ಸೂಚಿಸಿದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆ ಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ -2013 (ಪಿಒಎಸ್‌ಎಚ್ ಆಕ್ಟ್) ಕಾಯಿದೆ ಕೇವಲ ಕಾಗದಕ್ಕೆ ಸೀಮಿತವಾಗುಳಿಯದೇ ಅನುಷ್ಠಾನ ಸರಿಯಾದ ರೀತಿಯಲ್ಲಿ ಆಗುವ ಮೂಲಕ ಮಳೆಯರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದರು.

ಇಂದು ಬೆಳಗ್ಗೆ ಮಲ್ಪೆ ಬಂದರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಸಂದರ್ಶಿಸಿದಾಗ ಅವರುಗಳು ನಿಜವಾದ ಫಲಾನುಭಗಳಾಗಿದ್ದರೂ ಸಹ ಸರಕಾರದ ಸೌಲಭ್ಯದಿಂದ ವಂಚಿತ ರಾಗಿದ್ದಾರೆ. ಕಾರಣ ಅವರಿಗೆ ಅರಿವಿನ, ಮಾಹಿತಿ ಕೊರತೆ ಇದೆ. ಸರಕಾರದ ಸೌಲಭ್ಯ ತಿಳಿಸುವ ವಿಶೇಷ ಶಿಬಿರ ಆಯೋಜಿಸುವುದರೊಂದಿಗೆ ಅವರಿಗೆ ಸೌಲಭ್ಯ ತಲುಪಿಸಿ, ಆಯೋಗಕ್ಕೆ ವರದಿ ಮಾಡುವಂತೆ ಸೂಚಿಸಿದರು.

ಮಲ್ಪೆಯಲ್ಲಿ ಶುಚಿತ್ವಕ್ಕೆ ಒತ್ತು ನೀಡಿ: ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಿಸಿಟಿವಿಗಳನ್ನು ಅಳವಡಿಸಬೇಕು. ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಠಾಣೆಗಳಲ್ಲಿ ಸ್ಪಂದನೆ ಬೇಕು: ಸಮಾಜದಲ್ಲಿ ದುರ್ಬಲರಾದ ಮಹಿಳೆಯರು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳಿಗೆ ಬಂದಾಗ, ಅವರ ಸಮಸ್ಯೆಗಳನ್ನು ಸಂಯಮದಿಂದ ಕೇಳಿ ತಿಳಿದು ಅವರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕು. ಕಾಲೇಜುಗಳ ಸಮೀಪ ಮಾದಕ ವಸ್ತುಗಳ ತಡೆಗೆ ಕ್ರಮ ವಹಿಸಬೇಕು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮಹಿಳೆ ಯರು ಹೋದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಹಾಗೂ ಜಿಲ್ಲೆಯಲ್ಲಿ ಕೆಲವು ಮಹಿಳೆಯರ ಮೇಲೆ ಎಫ್‌ಐಆರ್ ಆಗಿರುವುದು ಕಂಡು ಬಂದಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಸಿ,ಎಸ್‌ಟಿಗೆ ಮಾಹಿತಿ ಕೊರತೆ: ಪರಿಶಿಷ್ಟ ಜಾತಿ ಮತ್ತು ಪಂಗಡದ ವರಿಗೆ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಗಳ ಕೊರತೆಯಿಂದ ಸೌಲಭ್ಯ ಗಳು ದೊರಕುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸರಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರ್ಪಡೆಗೆ ಅವಕಾಶಗಳು ದೊರೆಯುತ್ತಿಲ್ಲ ಎಂಬ ಬಗ್ಗೆ ಕೇಳಿಬರುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಹೊಸ ಹಾಸ್ಟೆಲ್‌ಗಳ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು ಎಂದ ಅವರು, ಪ್ರಸ್ತುತ ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದೈನಂದಿನ ಆರೋಗ್ಯ ಸೇವೆಗಳ ಚಟುವಟಿಕೆಗಳು ನಡೆಯಲು ಮೂಲಭೂತ ಸೌಕರ್ಯಗಳ ಸಮಸ್ಯೆ ಗಳನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆಯ ಮೇಲೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆಯಿಂದ ಕಳೆದ ಒಂದು ವರ್ಷದಿಂದ ಹೆರಿಗೆಗಾಗಿ ಹೆಣ್ಣು ಮಕ್ಕಳು ಇತರೆ ತಾಲೂಕು ಅಥವಾ ಜಿಲ್ಲೆಗೆ ಹೋಗುವಂತಹ ಅನಿವಾರ್ಯತೆ ಉಂಟಾಗಿದೆ. ಕೂಡಲೇ ಹೆರಿಗೆ ತಜ್ಞರನ್ನು ನೇಮಕ ಮಾಡಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದರು.

ರಾಜ್ಯ ಮಹಿಳಾ ಆಯೋಗದಲ್ಲಿ ಜಿಲ್ಲೆಯಿಂದ ದಾಖಲಾಗಿರುವ ಸುಮಾರು 54 ಪ್ರಕರಣಗಳ ವಿಚಾರಣೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ರೂಪ ಆರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News