ಕಾರ್ಕಳ ಆನೆಕೆರೆ, ವರಂಗ ಜೈನ ಬಸದಿಗಳ ಅಭಿವೃದ್ಧಿಗೆ 116 ಕೋಟಿ ರೂ. ಅನುದಾನ: ಗಜೇಂದ್ರ ಸಿಂಗ್ ಶೆಖಾವತ್
ಕಾರ್ಕಳ: ಆನೆಕೆರೆ, ಹಾಗೂ ವರಂಗ ಜೈನ ಬಸದಿಗಳ ಅಭಿವೃದ್ಧಿಗಾಗಿ ಸ್ವದೇಶಿ ದರ್ಶನ್ ಯೋಜನೆಯಡಿಯಲ್ಲಿ 116 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಕಾರ್ಕಳಕ್ಕೆ ಇಂದು ಬೆಳಗ್ಗೆ ಆಗಮಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವರು ಐತಿಹಾಸಿಕ ಆನೆಕೆರೆ ಮತ್ತು ರಾಮಸಮುದ್ರ ವೀಕ್ಷಣೆ ನಡೆಸಿದರು.
ಭಾರತವು ವಿವಿಧತೆಯಿಂದ ಕೂಡಿದ್ದು, ವಿವಿಧತೆಯಿಂದ ಏಕತೆಗೆ ಜೋಡಿಸುವ ಕೆಲಸವನ್ನು ಧಾರ್ಮಿಕ ಕೇಂದ್ರಗಳು ವೈವಿಧ್ಯಮಯಗೊಳಿಸಿವೆ ಎಂದರು.
ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದಂತಹ ಪ್ರವಾಸಿಗರ ಮೇಲಿನ ರಾಕ್ಷಸಿ ಪ್ರವೃತ್ತಿಯ ಉಗ್ರರ ದಾಳಿಗೆ ನಾವು ಸೂಕ್ತ ಪ್ರತ್ಯುತ್ತರವನ್ನು ನೀಡುತ್ತೇವೆ. ಭಾರತ ನಿನ್ನೆ ಸೂಕ್ತ ಹಾಗೂ ಕೆಚ್ಚೆದೆಯ ಅತ್ಯುಗ್ರ ಉತ್ತರವನ್ನು ಪಾಕಿಸ್ಥಾನಕ್ಕೆ ನೀಡಿದೆ. ಈ ಕಾರ್ಯಾಚರಣೆ ಭಾರತದ ಬದಲಾಗುತ್ತಿರುವ ಚಿತ್ರವಾಗಿದೆ. ಒಂದೆಡೆ ಭಾರತ ಸಮರ್ಥ ಹಾಗೂ ಸಶಕ್ತವಾಗುತ್ತಿದೆ. ಇದು ನಮ್ಮ ಶಕ್ತಿ ಹಾಗೂ ಅಭಿವೃದ್ದಿಯ ಸಂಕೇತವಾಗಿದೆ. ದೇಶವನ್ನು ಸಾಂಸ್ಕೃತಿಕ ಸಮೃದ್ಧಿಯೆಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಇದೇವೇಳೆ ಆನೆಕೆರೆ ಬಸದಿಗೆ ಭೇಟಿ ನೀಡಿದ ಸಚಿವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನೀಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಸಹಾಯಕ ಆಯುಕ್ತೆ ರಶ್ಮಿ, ತಹಶೀಲ್ದಾರ್ ಪ್ರದೀಪ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಬಿಜೆಪಿ ಹಿರಿಯ ಮುಖಂಡ ಎಂ.ಕೆ.ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಆಂತೋನಿ ಡಿಸೋಜ ನಕ್ರೆ, ಆನೆಕೆರೆ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಉದ್ಯಮಿ ಮಹೇಂದ್ರ ವರ್ಮ ಜೈನ್, ಸಂಪತ್ ಕುಮಾರ್ ಜೈನ್, ಕೋಶಾಧಿಕಾರಿ ಶೀತಲ್ ಕುಮಾರ್ ಜೈನ್, ಕಾರ್ಯದರ್ಶಿ ಭರತ್ ಕುಮಾರ್ ಜೈನ್, ಮಹಾವೀರ್ ಜೈನ್ ಶಿರ್ಲಾಲು , ಗೇರು ಅಭಿವೃಧ್ದಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜೈನ ಸಮುದಾಯದ ಪ್ರಮುಖರಾದ ಎನ್.ಪ್ರಭಾತ್, ದೇವರಾಜ್ ಅಧಿಕಾರಿ, ಜಗದೀಶ್ ಹೆಗ್ಡೆ, ಪುರಸಭಾ ಮಾಜಿ ಸದಸ್ಯ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.