ಮಹಿಳಾ ಸಬಲೀಕರಣಕ್ಕಾಗಿ ಸಂಜೀವಿನಿ ಯೋಜನೆ: ಡಾ.ಮಮತ
ಉಡುಪಿ, ನ.10: ಗ್ರಾಮೀಣ ಮಟ್ಟದ ಮಹಿಳೆಯರ ಸಬಲೀಕರಣಕ್ಕಾಗಿ ಸಂಜೀವಿನಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಹಾಗೂ ಪ್ರತಿಯೊಬ್ಬ ಮಹಿಳೆ ಲಭ್ಯ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಉದ್ಯೋಗ ಚಟುವಟಿಕೆ ಪ್ರಾರಂಭಿಸಬೇಕು ಎಂದು ರಾಜ್ಯ ಮಾಹಿತಿ ಆಯುಕ್ತೆ ಡಾ.ಬಿ.ಆರ್.ಮಮತ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ - ಸಂಜೀವಿನಿ- ಉಡುಪಿ ಜಿಲ್ಲಾ ಪಂಚಾಯತ್ ಮೂಲಕ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸ್ವ-ಸಹಾಯ ಗುಂಪುಗಳ ಮಹಿಳೆಯರ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಹಾಗೂ ಸಾಮಾಜಿಕ ಭದ್ರತೆಗಾಗಿ ಮಹಿಳೆಯರನ್ನು ಸಜ್ಜುಗೊಳಿಸುವ ಕುರಿತು ಏರ್ಪಡಿಸಿದ ಸಂವಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವೀಜಿನಿಯ ಸದಸ್ಯೆಯರು ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿ ಪ್ರಾರಂಭಿಸಿರುವ ಚಟುವಟಿಕೆಗಳನ್ನು ಅಧ್ಯಯನ ನಡೆಸಿ, ಉತ್ತಮ ಅಂಶಗಳನ್ನು ಇಲ್ಲಿ ಅನುಷ್ಠಾನಗೊಳಿಸಿ ದೇಶಕ್ಕೆ ಉಡುಪಿ ಜಿಲ್ಲೆಯ ಸಂಜೀವಿನಿ ಯೋಜನೆ ಮಾದರಿ ಎನಿಸುವಂತಿರಬೇಕು ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಿಸಿರುವ ವಿನೂತನ ಚಟುವಟಿಕೆಗಳಿಗೆ ಡಾ.ಮಮತ ಪ್ರಶಂಸೆ ವ್ಯಕ್ತಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಪಂ ಮುಖ್ಯ ಯೋಜನಾಧಿಕಾರಿ ಉದಯ್ ಶೆಟ್ಟಿ, ಯೋಜನಾ ನಿರ್ದೇಶಕ ವಿಜಯಕುಮಾರ್, ಮಹಿಳಾ ಉದ್ದಿಮೆದಾರರಾದ ಗೌರಿ ಮತ್ತು ಪಾರ್ವತಿ, ಕಾಪು ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಗ್ರಾಮ ಮಟ್ಟದ ಸಂಜೀವಿನಿ ಒಕ್ಕೂಟ ಅಧ್ಯಕ್ಷರು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಕಾರ್ಯಕ್ರಮ ನಿರೂಪಿಸಿ, ತಾಲೂಕು ವ್ಯವಸ್ಥಾಪಕ ಪ್ರಶಾಂತ್ ವಂದಿಸಿದರು.