ವಿದ್ಯಾರ್ಥಿಗಳು ಶಿಕ್ಷಣಕ್ಕೆ, ಸಮಯಕ್ಕೆ ಮಹತ್ವ ನೀಡಿ: ಸಚಿವೆ ಹೆಬ್ಬಾಳ್ಕರ್
► ಶೆಟ್ಟಿಬೆಟ್ಟು ಶಾಲೆಯಲ್ಲಿ ಸುಜ್ಞಾನ ಸಭಾಂಗಣ ಉದ್ಘಾಟನೆ ►ಮಕ್ಕಳಿಗೆ ಉಚಿತ ಟ್ರ್ಯಾಕ್ ಸೂಟ್ ವಿತರಣೆ
ಪರ್ಕಳ (ಉಡುಪಿ): ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಹಾಗೂ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕೇವಲ ಪಠ್ಯಗಳಿಗೆ ಸೀಮಿತವಾಗದೇ, ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಪರ್ಕಳದ ಬಳಿ ಇರುವ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸುಜ್ಞಾನ ಸಭಾಂಗಣವನ್ನು’ ಉದ್ಘಾಟಿಸಿ, ಬಳಿಕ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾದ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಅವರು ಮಾತನಾಡುತಿದ್ದರು.
ಪೋಷಕರಿಗೆ ಮಕ್ಕಳೇ ಆಸ್ತಿ. ಮಕ್ಕಳ ಉತ್ತಮ ಭವಿಷ್ಯ ಪ್ರತಿಯೊಬ್ಬ ಹೆತ್ತವರ ಕನಸಾಗಿರುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ತಂದೆ ತಾಯಿ ಕಂಡ ಕನಸನ್ನು ನನಸಾಗಿಸಬೇಕು. ಈ ಮೂಲಕ ಗುರು-ಹಿರಿಯರಿಗೆ, ಹೆತ್ತವರಿಗೆ ಗೌರವ ತಂದುಕೊಡಬೇಕು ಎಂದರು.
ವಿದ್ಯಾರ್ಥಿಗಳು, ಪಾಲಕರು ಹಾಗೂ ಸಮಾಜದ ಜವಾಬ್ದಾರಿಯುತ ನಾಗರಿಕರು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣ ಪಡೆಯುವ ಸಮಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಆದ್ಯತೆ ನೀಡಬೇಕು. ತಮ್ಮ ಸುತ್ತಮುತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳ ಯಶೋಗಾಥೆಗಳನ್ನು ಬದುಕಿನಲ್ಲಿ ರೂಪಿಸಿಕೊಳ್ಳಬೇಕು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭಾ ಸದಸ್ಯೆ ಅಶ್ವಿನಿ ಅರುಣ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಡಿಡಿಪಿಐ ಲೋಕೇಶ್, ಬ್ರಹ್ಮಾವರದ ಬಿಇಒ ಶಬಾನಾ ಅಂಜುಮ್, ಡಯಟ್ ಉಪನಿರ್ದೇಶಕ ಡಾ.ಅಶೋಕ್ ಕಾಮತ್ ಹಾಗೂ ಇತರರು ಉಪಸ್ಥಿತರಿದ್ದರು.
ಶಾಲೆಯ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ರಾಮಕೃಷ್ಣ ನಾಯಕ್ ಸ್ವಾಗತಿಸಿದರೆ, ಪ್ರಶಾಂತ್ ಶೆಟ್ಟಿ ಹಾಗೂ ಅಮೃತರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರತ್ನಾ ಕೆ.ವಂದಿಸಿದರು.