ಹೆಬ್ರಿ: ಅಳುಪ ನಾಗದೇವರಸನ ಶಾಸನದ ಅಧ್ಯಯನ
ಉಡುಪಿ: ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಪಂ ವ್ಯಾಪ್ತಿಯ ಅಲ್ಬಾಡಿ ಪ್ರದೇಶದ ತೊನ್ನಾಸೆಯಲ್ಲಿ ಕೀರ್ತಿ ಎಂಬವರ ಗದ್ದೆಯಲ್ಲಿ ಪತ್ತೆಯಾಗಿದ್ದ ಶಾಸನದ ಅಧ್ಯಯನವನ್ನು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಹಾಗೂ ಇತಿಹಾಸಜ್ಞ ಡಾ.ಬಿ.ಜಗದೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕರಾದ ಮಹೇಶ್ ಶೆಟ್ಟಿ ಆರ್ಡಿ ಮಾಡಿದ್ದಾರೆ.
ಕಣಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 26ಸಾಲುಗಳನ್ನು ಹೊಂದಿದ್ದು, ಮಧ್ಯಯು ಗೀನ ಆಳುಪ ಮನೆತನಕ್ಕೆ ಸೇರಿರುತ್ತದೆ. ಶಾಸನದಲ್ಲಿ ಆಳುಪ ದೊರೆ ನಾಗದೇವರಸನನ್ನು ‘ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಬಸವ ಸಂಕರ’ ಎಂದು ಕರೆದಿದ್ದು, 1234ನೇ ಪರಿಧಾವಿ ಸಂವತ್ಸರದ ವೃಶ್ಚಿಕ ಮಾಸ 3ನೆಯ ಮಂಗಳವಾರ (ಸಾಮಾನ್ಯ ವರ್ಷ ನವೆಂಬರ್14, 1312)ದ ಕಾಲಮಾನದ್ದಾಗಿರುತ್ತದೆ.
ಈ ಸಂದರ್ಭದಲ್ಲಿ ಆಳುಪರ ರಾಜಧಾನಿಯಾದ ಬಾರಹಕಂನ್ಯಾಪುರ (ಪ್ರಸ್ತುತ ಬಾರಕೂರು) ಅರಮನೆಯ ಸಂನಿಧಾನ ದಲ್ಲಿ ಮಹಾಪ್ರಧಾನ ದೆವಣ ದಂಣಾಯಕ, ಸಮಸ್ತ ಪ್ರಧಾನರೂ ಮಾತ್ರವಲ್ಲದೆ ನಾಗದೇವರಸ, ಸೋಯಿದೇವರಸ ಹಾಗೂ ಚಿಕ್ಕಾಯಿತಾಯಿ ಈ ಮೂವರು ತಮ್ಮೊಳಗೆ ಏಕಸ್ತರಾಗಿ ಸೋಮಗ್ರಹಣ (ಚಂದ್ರಗ್ರಹಣ) ದಂದು ಬೇಳುಂಜೆಯ ಹಿರಿಯ ಹರಿಹರನ ಮಗನಾದ ವಿಷ್ಣುವಿಗೆ ತೊಡುಸಿ (ಪ್ರಸ್ತುತ ತೊನ್ನಾಸೆ)ಯ ಒಳಗೆ ಮಾಡಿದ ಭೂದಾನದ ವಿಚಾರವನ್ನು ತಿಳಿಸುತ್ತದೆ.
ಹಾಗೆಯೇ ದಾನ ಮಾಡಿದ ಭೂಮಿಗೆ ಮರಿಯಾದೆಯಲ್ಲಿ ನಡೆಯಬೇಕೆಂದು ಮತ್ತು ಶ್ರೀಕೋಟೇಶ್ವರ ದೇವರಿಗೆ ಕಂಚಿನ ದೀಪಮಾಲೆ ಹಾಗೂ ನಂದಾವೇಳೆಗೆ ನವರಂಗ ಮಾಲೆಯನ್ನು ಕೊಟ್ಟು ಬರಬೇಕೆಂದು ಕಲ್ಬರಹವು ದಾಖಲಿಸು ತ್ತದೆ. ಶಾಸನದ ಕೊನೆಯ ಭಾಗದಲ್ಲಿ ಶಾಪಾಶಯ ವಾಕ್ಯವಿದ್ದು, ಅಜರಾಮರವಾಗಿ ಹಾಕಿದ ಈ ಕಲ್ಬರಹವನ್ನು ಯಾರಾದರೂ ಹಾಳುಗೆಡವಿದರೇ ಬ್ರಾಹ್ಮಣ ಹತ್ಯೆ, ನರ್ಮದಾ ವಾರಣಾಸಿಯಲ್ಲಿ ಕವಿಲೆಯನ್ನು ಅಂದರೆ ಪವಿತ್ರವಾದ ಗೋವನ್ನು ವಧಿಸಿದ ಪಾಪ ದಕ್ಕುವುದಲ್ಲದೇ ಕೋಟೀಶ್ವರ ದೇವರನ್ನು ಕಿತ್ತ ದೋಷವು ತಟ್ಟುವುದೆಂದು ಹೇಳಲಾಗಿದೆ.
ಈ ಕಲ್ಬರಹದ ಬರಹ ಸಿರಪತಿ (ಶ್ರೀಪತಿ) ಸೇನಭೋವ ಎಂಬಾತನದ್ದು ಎಂಬುದು ಇಲ್ಲಿ ತಿಳಿದುಬರುತ್ತದೆ. ಕಲ್ಬರದ ಮೇಲಿನ ಹಂತದಲ್ಲಿ ಶಾಸನ ಶಿಲ್ಪಗಳಿದ್ದು, ಮುಖ್ಯವಾಗಿ ಶಾಸನ ಉಲ್ಲೇಖಿತ ಕೋಟಿಶ್ವರ ದೇವರಾದ ಕೈಲಾಸವಾಸಿ ಪರಶಿವನನ್ನು ಲಿಂಗರೂಪಿಯಾಗಿ ದೀಪದಿಂದ ಕಂಗೊಳಿಸುತ್ತಿ ರುವಂತೆ ತೋರಿಸಲಾಗಿದೆ. ಕರುವಿಗೆ ಹಾಲುಣಿಸುತ್ತಿ ರುವ ಗೋವಿನ ಕೆತ್ತನೆಯಿದ್ದು, ದಾನದ ಪ್ರತೀಕವಾಗಿ ಅಥವಾ ದಾನ ನೀಡಿರುವ ಈ ಶಾಸನವನ್ನು ಹಾಳುಗೆಡವಿದರೆ ಇಂತಹ ಪವಿತ್ರವಾದ ಕವಿಲೆಯನ್ನು ನರ್ಮದಾ ಮತ್ತು ವಾರಣಾಸಿಯಲ್ಲಿ ವಧಿಸಿದ ದೋಷ ದಕ್ಕುತ್ತದೆ ಎಂಬುದನ್ನು ಇಲ್ಲಿ ಸಾಂಕೇತಿಕವಾಗಿ ತೋರಿಸಿರಬಹುದು.
ಮುಖ್ಯವಾಗಿ ಈ ಕಲ್ಬರಹವು ಬೇಳುಂಜಿಯ ಹಿರಿಯ ಹರಿಹರನ ಮಗ ವಿಷ್ಣು ಎಂಬ ವ್ಯಕ್ತಿಗೆ ನೀಡಿದ ಭೂದಾನವನ್ನು ಉಲ್ಲೇಖಿಸಿರುವುದರಿಂದ ಈತನು ವಸ್ತ್ರವನ್ನು ಧರಿಸಿ, ಕೈಯಲ್ಲಿ ಖಡ್ಗವನ್ನು ಹಿಡಿದಿರುವಂತೆ ತೋರಿಸಲಾಗಿದೆ ಎಂದು ಊಹಿಸಬಹುದಾಗಿದೆ. ಕೊನೆಯದಾಗಿ ಈ ಶಾಸನ ಅಜರಾಮರವಾಗಿ ಉಳಿಯಬೇಕೆಂದು ಚಂದ್ರಾರ್ಕ್ಕರ (ಸೂರ್ಯ-ಚಂದ್ರ) ಕೆತ್ತನೆ ಮಾಡಲಾಗಿದೆ.
ಶಾಸನದ ಮಹತ್ವ: ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಿದ ಈ ಶಾಸನವು ಮಧ್ಯಯುಗೀನ ಆಳುಪರ ಇತಿಹಾಸ ದಲ್ಲಿಯೇ ಕಾಲಮಾನದ ದೃಷ್ಟಿಯಿಂದ ಬಹು ಪ್ರಮುಖವಾಗಿದೆ. ಏಕೆಂದರೆ ಆಳುಪ ನಾಗದೇವರಸನ ಆಡಳಿತ ಅವಧಿಯು ಸಾಮಾನ್ಯ ವರ್ಷ 1292-1300 ಎಂದು ಈ ಮೊದಲು ದಾಖಲಾಗಿದ್ದು, ಪ್ರಸ್ತುತ ಬೆಳಕಿಗೆ ಬಂದಿರುವ ಕಲ್ಬರಹವು ಈತನು ಸಾ.ಶ.ವ 1292ರಿಂದ 1312ರವರೆಗೂ ಅಥವಾ 1312ರಲ್ಲಿಯೂ ಆಡಳಿತ ನಡೆಸಿದ್ದ ನೆಂದು ದೃಢಪಡಿಸುತ್ತದೆ.
ಬಹುಮುಖ್ಯವಾಗಿ ಈ ಶಾಸನವು ಇದುವರೆಗೆ ತುಳುನಾಡಿನಲ್ಲಿ ದೊರಕಿರುವ ಚಿಕ್ಕಾಯಿತಾಯಿಯ ಉಲ್ಲೇಖವಿರುವ ಪ್ರಥಮ ಶಾಸನವಾಗಿದೆ ಎಂದು ಹೇಳಬಹುದು. ಈಕೆಯ ಆಡಳಿತ ಕಾಲವನ್ನು ಸಾ.ಶ.ವ 1333-48 ರವರೆಗೆ ಗುರುತಿಸಿದ್ದು, ಪ್ರಸ್ತುತ ಶಾಸನವು 1312ರ ಕಾಲಮಾನಕ್ಕೆ ಸೇರಿರುವುದರಿಂದ ಈಕೆ ಈ ಕಾಲದಲ್ಲಿಯೇ ರಾಜಕೀಯ ಪ್ರೌಢಿಮೆಯನ್ನು ಹೊಂದಿರಬಹುದೆಂದು ಊಹಿಸಬಹುದಾಗಿದೆ.
ಈ ಕಲ್ಬರಹ ಓದಿಗೆ ಕುವೆಂಪು ವಿಶ್ವವಿದ್ಯಾಲಯಕೆಳದಿ ವಸ್ತುಸಂಗ್ರಹಾಲಯ ಇಲ್ಲಿನ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಸಹಕಾರ ನೀಡಿದ್ದರು. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಆಶ್ಲೇಷ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿದ್ದರು ಎಂದು ಪ್ರಕಟಣೆ ತಿಳಿಸಿದೆ.