×
Ad

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಶಾಲೆಗಳಲ್ಲಿ ‘ಪ್ರತಿಭಾನ್ವೇಷಣೆ’: ಉಡುಪಿ ಸಿಇಓ ಪ್ರತೀಕ್ ಬಾಯಲ್

ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

Update: 2025-09-05 19:32 IST

ಉಡುಪಿ, ಸೆ.5: ಕ್ರೀಡೆಯೂ ಸೇರಿದಂತೆ ವಿದ್ಯಾರ್ಥಿಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಲು ಜಿಲ್ಲೆಯ ಶಾಲೆಗಳಲ್ಲಿ ‘ಪ್ರತಿಭಾನ್ವೇಷಣೆ’ (ಟ್ಯಾಲೆಂಡ್ ಹಂಟ್)ಯನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಹಾಗೂ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ಶುಕ್ರವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮತ್ತು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಹೆತ್ತವರು ಕಲಿಕೆಗೆ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದಕ್ಕೆ ಪ್ರಾಶಸ್ತ್ಯ ನೀಡುತಿ ದ್ದಾರೆ. ಕರಾವಳಿಯ ಮಕ್ಕಳಲ್ಲೂ ನಾನಾ ರೀತಿಯ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಶಾಲಾ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿ ಸಲು ಟ್ಯಾಲೆಂಟ್ ಹಂಟ್‌ನ್ನು ಶಾಲೆ ಗಳಲ್ಲೇ ನಡೆಸಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ಉಡುಪಿಯಿಂದಲೇ ಪ್ರಾರಂಭಿಸಲಾಗುವುದು ಎಂದರು.

ಜಿಲ್ಲೆ ಈಗಾಗಲೇ ಶಿಕ್ಷಣದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಇದಕ್ಕೆ ಶಿಕ್ಷಕರ ಶ್ರಮ ಮತ್ತು ಶೃದ್ದೆಯೇ ಕಾರಣ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯ ಜೊತೆಗೆ ಜೀವನ ಕೌಶಲ್ಯಗಳಲ್ಲಿಯೂ ಮಾರ್ಗದರ್ಶನ ನೀಡಬೇಕು. ತಮ್ಮ ವೃತ್ತಿ ಜೀವನದ ಅನುಭವವನ್ನು ಧಾರೆ ಎರೆದು ಮಕ್ಕಳಲ್ಲಿ ಮೂಲಭೂತ ನಾಗರಿಕ ಪ್ರಜ್ಞೆ, ವೃತ್ತಿ ಆಧಾರಿತ ಕೌಶಲ್ಯಗಳು, ವೃತ್ತಿ ಸಮಾಲೋಚನೆಗಳು, ಜೀವನ ಶೈಲಿಯ ಪಾಠಗಳನ್ನೂ ಕಲಿಸಿಕೊಡುವ ಜೊತೆಗೆ ಮಕ್ಕಳಲ್ಲಿ ಹುದುಗಿರಬಹುದಾದ ಪ್ರತಿಭೆಗಳನ್ನು ಹುಡುಕಿ ಮುನ್ನೆಲೆಗೆ ತರಲು ಪ್ರಯತ್ನಿಸಬೇಕು. ಪಾಠಪಠ್ಯಗಳ ಕಲಿಕೆಯ ಜೊತೆಗೆ ಕ್ರೀಡೆಯಲ್ಲಿಯೂ ಕೂಡಾ ಮಕ್ಕಳನ್ನು ತೊಡಗಿಸಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮಿಂಚುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ,ದೇಶದ ಭವಿಷ್ಯ ತರಗತಿ ಯೊಳಗೆ ರೂಪುಗೊಳ್ಳುತ್ತದೆ ಎಂಬ ಮಾತಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರನ್ನು ರೂಪುಗೊಳಿಸು ವವರು ಶಿಕ್ಷಕರು. ಶಿಕ್ಷಕರು ಭವ್ಯ ಭಾರತವನ್ನು ನಿರ್ಮಿಸುವ ಶಿಲ್ಪಿಗಳು. ಶಿಕ್ಷಕರು ತಮ್ಮ ಪ್ರಾಮಾಣಿಕ ಸೇವೆಯಿಂದ ಮಕ್ಕಳ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ದೇಶದ ಭವಿಷ್ಯವನ್ನೂ ರೂಪಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯದ ಶಿಕ್ಷಣ ಕಾಶಿ ಎನಿಸಿದೆ. ಉತ್ತಮ ಗುಣಮಟ್ಟದ, ಶಿಸ್ತುಬದ್ದ ಶಿಕ್ಷಣ ವ್ಯವಸ್ಥೆ ಯಿಂದ ದೇಶ-ವಿದೇಶಗಳಲ್ಲಿ ಹೆಸರು ಮಾಡಿ ಎಲ್ಲರಿಗೂ ಮಾದರಿಯಾಗಿದೆ. ಈ ಗೌರವವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಕ್ಷಮತೆ ತೋರಬೇಕಿದೆ ಎಂದರು.

ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಶ್ಯಾಮಿಲಿ ಶಂಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ದರು. ಖ್ಯಾತ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಕಾರ್ಕಳ ಶಿಕ್ಷಕರ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾ ಯಿತು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ತಲಾ ಐವರು ಶಿಕ್ಷಕರನ್ನು ಹಾಗೂ ಕಳೆದೊಂದು ವರ್ಷದಲ್ಲಿ ಸೇವಾ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಮೂವರು ಶಿಕ್ಷಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ‘ಗುರು ಗರಿಮೆ’ ಪುಸ್ತಕವನ್ನು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು,ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಡಾ.ಅಶೋಕ್ ಕಾಮತ್, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ ಸ್ವಾಗತಿಸಿದರು. ಒಳಕಾಡು ಶಾಲೆಯ ಅಧ್ಯಾಪಕ ಗಣಪತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ವಂದಿಸಿದರು.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News