"ಇಂಜಿನಿಯರ್ ಪದವಿ ಜೊತೆ ಐಪಿಎಸ್ ಅಧಿಕಾರಿ ಆಗುವ ಕನಸು": ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ತರುಣ್ 6ನೇ ರ‍್ಯಾಂಕ್
ಸುಮಂತ ಗೌಡ
ಉಡುಪಿ: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಟಾಪರ್ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಕಳ ಕುಕ್ಕುಂದೂರು ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತರುಣ್ ಸುರನ ಶೇ.98.56 ಅಂಕದೊಂದಿಗೆ ರಾಜ್ಯಕ್ಕೆ ಆರನೇ ರ್ಯಾಂಕ್ ಗಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ತರುಣ್, ಸುರತ್ಕಲ್‌ನ ಐಐಟಿ ಅಥವಾ ಎನ್‌ಐಟಿಕೆಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಲು ಉತ್ಸುಕನಾಗಿದ್ದಾನೆ.
‘ಇಂಜಿನಿಯರಿಂಗ್ ಮೇಲಿನ ಉತ್ಸಾಹದ ಜೊತೆಗೆ, ಐಪಿಎಸ್ ಅಧಿಕಾರಿ ಯಾಗುವ ಕನಸನ್ನೂ ಹೊಂದಿದ್ದೇನೆ. ಕಾಲೇಜಿನಲ್ಲಿ ಕಠಿಣ ಪರಿಶ್ರಮ ಹಾಗೂ ಎಲ್ಲ ಪ್ರೋತ್ಸಾಹ ಈ ಸಾಧನೆ ಮಾಡಲು ಕಾರಣ. ಪ್ರತಿದಿನ 4 ರಿಂದ 6 ಗಂಟೆಗಳ ಅಧ್ಯಯನ ಮಾಡುತ್ತಿದ್ದೆ’ ಎಂದು ತರುಣ್ ಸುರನ ತಿಳಿಸಿದರು.
ಇವರ ತಾಯಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ತಂದೆ ಖಾಸಗಿ ಸಂಸ್ಥೆಯಲ್ಲಿ ಕೃಷಿಕ ಮತ್ತು ವ್ಯವಸ್ಥಾಪಕರಾಗಿದ್ದಾರೆ. ತರುಣ್ ಜೆಇಇ ಫಲಿತಾಂಶವನ್ನು ಕಾಯುತ್ತಿದ್ದಾರೆ.
ಸುಮಂತ ಗೌಡ ಕೃಷಿ ವಿಭಾಗದಲ್ಲಿ 4ನೇ ರ‍್ಯಾಂಕ್
ಕಾರ್ಕಳ ಕುಕ್ಕುಂದೂರು ಸಪ್ತಗಿರಿ ಕ್ಯಾಂಪಸ್‌ನ ಕ್ರಿಯೆಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಮಂತ ಗೌಡ ಅಗ್ರಿಕಲ್ಚರ್ ವಿಭಾಗದಲ್ಲಿ ಶೇ.97.58 ಅಂಕದೊಂದಿಗೆ ನಾಲ್ಕನೇ ರ್ಯಾಂಕ್ ಹಾಗೂ ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ (ಬಿಎನ್‌ವೈಎಸ್) ವಿಭಾಗದಲ್ಲಿ ಶೇ.98.72 ಅಂಕದೊಂದಿಗೆ 9ನೇ ರ‍್ಯಾಂಕ್ ಪಡೆದಿದ್ದಾರೆ.
ಮೂಲತಃ ಗದಗ ಜಿಲ್ಲೆಯ ರಾನ್‌ನವರಾದ ಸುಮಂತ್, ಪದವಿ ಶಿಕ್ಷಣಕ್ಕಾಗಿ ಕಾರ್ಕಳಕ್ಕೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಯಾವುದೇ ಟ್ಯೂಷನ್ ಗಳಿಲ್ಲದೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಕೇಂದ್ರೀಕೃತ ಕಲಿಕೆಯಲ್ಲಿ ತೊಡಗಿ ಕೊಂಡು ಸ್ಥಿರವಾದ ಸ್ವ-ಅಧ್ಯಯನಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಈ ಸಾಧನೆ ಮಾಡಿದ್ದಾರೆ. ಸುಮಂತ್ ಪ್ರಸ್ತುತ ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರ ತಂದೆತಾಯಿ ಇಬ್ಬರೂ ಪ್ರೌಢಶಾಲಾ ಶಿಕ್ಷಕರು.