×
Ad

ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ರೂಪಿಸುವವರು ಶಿಕ್ಷಕರು: ಬಿಷಪ್ ಜೆರಾಲ್ಡ್ ಲೋಬೊ

Update: 2025-09-06 14:52 IST

ಉಡುಪಿ, ಸೆ.6: ಶಿಕ್ಷಕರು ಕೇವಲ ಪಾಠ ಪುಸ್ತಕವನ್ನು ಭೋಧಿಸುವವರಲ್ಲ. ಬದಲಾಗಿ ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿ ರೂಪಿಸುವವರಾಗಿದ್ದಾರೆ. ಶಿಕ್ಷಕರು ತಮ್ಮ ಅತೀವವಾದ ಬದ್ದತೆ, ನಿಷ್ಟೆ ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ. ಶಿಕ್ಷಕರ ಕರ್ತವ್ಯ ನಿಷ್ಟೆಯ ಸೇವೆ ದೇಶವನ್ನು ಕಟ್ಟುವ ಮುಂದಿನ ನಾಯಕರನ್ನು ರೂಪಿಸುವ ಹಾಗೂ ಜ್ಞಾನಿ ವಿಜ್ಞಾನಿಗಳನ್ನು ಸೃಷ್ಟಿಸುವ ಸೇವೆಯನ್ನು ನೀಡುತ್ತಾರೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕೆಥೊಲಿಕ್ ಎಜುಕೇಶನಲ್ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಉಡುಪಿ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದ ಅಮೂಲ್ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಕೆಥೊಲಿಕ್ ವಿದ್ಯಾ ಸಂಸ್ಥೆಗಳು ಕೇವಲ ಭೌದ್ಧಿಕ ಕೌಶಲ್ಯವಲ್ಲದೆ ನೈತಿಕ ಮೌಲ್ಯಗಳು ಮತ್ತು ವಿಶ್ವಾಸದ ಬೆಳಕನ್ನು ಹರಡುವ ಪೀಠಗಳಾಗಬೇಕು. ಇಂದಿನ ಯುಗದಲ್ಲಿ ಶಿಕ್ಷಕರು ಹಲವಾರು ಪಂಥಾಹ್ವಾನಗಳನ್ನು ಎದುರಿಸಬೇಕಾಗಿದ್ದು ಮಾಧ್ಯಮ ತಂತ್ರಜ್ಞಾನ ಕೃತಕ ಬುದ್ದಿಮತ್ತೆ, ಸಾಮಾಜಿಕ ಒತ್ತಡ ಮತ್ತು ಮೌಲ್ಯಗಳ ಕುಸಿತದ ನಡುವೆಯೂ ಧೈರ್ಯದಿಂದ ಮುಂದೆ ಸಾಗಬೇಕಾದ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ಮೌಲ್ಯಗಳ ದೀಪಸ್ತಂಭಗಳಾಗುವುದರೊಂದಿಗೆ ಹೃದಯಗಳನ್ನು ರೂಪಿಸುವ ತಾಣಗಳಾಗಬೇಕು. ಕೇವಲ ಅಂಕಗಳನ್ನು ಪಡೆಯುವ ವ್ಯಕ್ತಿಗಳನ್ನಲ್ಲದೆ ಶ್ರದ್ಧೆ ಪ್ರೀತಿ ಮತ್ತು ಸೌಮ್ಯತೆಯ ಮಾದರಿಗಳನ್ನು ರೂಪಿಸುವಂತಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೆಶ್ ಸಿ. ಮಾತನಾಡಿ, ಜಿಲ್ಲೆಯ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟದಲ್ಲಿರಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದದು. ಶಿಕ್ಷಕರು ತೋರುವ ನಿಷ್ಠೆ ಹಾಗೂ ಪ್ರಯತ್ನದ ಫಲ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ದಯಾನಂದ ನಾಯ್ಕ್ ದಿಕ್ಸೂಚಿ ಭಾಷಣ ಮಾಡಿದರು. ಕರ್ತವ್ಯದಿಂದ ನಿವೃತ್ತಿ ಹೊಂದಿದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳನ್ನು, 10ನೆ ಹಾಗೂ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು, ಶೇ.100 ಫಲಿತಾಂಶ ಪಡೆದ ಶಿಕ್ಷಣ ಸಂಸ್ಥೆಗಳನ್ನು, ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳನ್ನು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ಉಡುಪಿಯ ಶ್ರೇಯಾಂಸ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ವಿನ್ಸೆಂಟ್ ಆಳ್ವಾ, ಡಾ.ಹೆರಾಲ್ಡ್ ಮೊನಿಸ್, ವಂ.ವಿಜಯ್ ಜೊಯ್ಸನ್ ಡಿಸೋಜ, ಸಿಸ್ಟರ್ ಪ್ರಮೀಳಾ ಶಾಂತಿ ಡಿಸೋಜ, ಎಲಿಝಾ ವಾಜ್, ವಂ.ಮೊತೇಶ್ ಮಥಾಯಸ್ ಸನ್ಮಾನಿತರನ್ನು ಪರಿಚಯಿಸಿದರು. ಕಥೊಲಿಕ್ ಎಜುಕೇಶನಲ್ ಸೊಸೈಟಿ ಕಾರ್ಯದರ್ಶೀ ವಂ.ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿದರು. ವಿಜಯ್ ಜೋಕಿಂ ಡಿಸೋಜ ವಂದಿಸಿದರು. ಸಿಸ್ಟರ್ ಅನಿತಾ ಡಿಸೋಜ ಹಾಗೂ ಸವಿತಾ ಕುಮಾರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News