ಕಾರ್ಕಳ: ಪೆರ್ಡೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣ ಆಘಾತವನ್ನುಂಟು ಮಾಡಿದೆ. ಯುವಕ-ಯುವತಿಯ ಪ್ರೇಮ ದ್ವೇಷಕ್ಕೆ ತಿರುಗಿ ಸಾವಿನಲ್ಲಿ ಅಂತ್ಯಗೊಂಡಿರುವುದು ಸಮಾಜ ಅರಗಿಸಿಕೊಳ್ಳಲು ಅಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳ ವರ್ತನೆ ಅತ್ಯಂತ ಪ್ರಮುಖವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಹೇಳಿದರು.

ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಮೊದಲ ಸಂತ್ರಸ್ತೆ ಯುವತಿಗೆ ನ್ಯಾಯ ಸಿಗಬೇಕು. ಎರಡನೇ ಸಂತ್ರಸ್ತ ಪ್ರದೀಪ್ ಪೂಜಾರಿಯ ಸಾವಿಗೂ ನ್ಯಾಯ ದೊರೆಯಬೇಕು. ಇಬ್ಬರ ಕುಟುಂಬಗಳ ನೋವು ಮತ್ತು ದುಃಖದಲ್ಲಿ ಸಮಾನವಾಗಿ ಭಾಗಿಯಾಗುತ್ತೇವೆ. ಅವರಿಬ್ಬರಿಗೂ ನ್ಯಾಯ ಸಿಗುವ ಹೋರಾಟದಲ್ಲಿ ನಾವೂ ಭಾಗಿಯಾಗುತ್ತೇವೆ ಎಂದರು.

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಆದರೆ ಪ್ರೇಮ ದ್ವೇಷವಾಗಿ ಮಾರ್ಪಟ್ಟು ಸಾವಿನಲ್ಲಿ ಅಂತ್ಯಗೊಳ್ಳಲು ಪ್ರಮುಖ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ಜನರ ಮುಂದಿಡುತ್ತಾರೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಎರಡು ಪ್ರಮುಖ ಸಮಾಜಗಳಿಗೆ ಸೇರಿದವರಾಗಿದ್ದು, ಆ ಎರಡೂ ಸಮಾಜಗಳು ಈ ನೆಲದ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ಬಹುದೊಡ್ಡ ಕೊಡುಗೆ ನೀಡಿವೆ. ಆದ್ದರಿಂದ ಎಲ್ಲರೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಪರಸ್ಪರ ಎರಡು ಸಮಾಜಗಳನ್ನು ಎತ್ತಿಕಟ್ಟುವ ಕೆಲಸವನ್ನು ಕೆಲವರು ಈಗಾಗಲೇ ಆರಂಭಿಸಿದ್ದಾರೆ. ಸಮಸ್ಯೆ ಧರ್ಮಗಳ ನಡುವಿನದ್ದಾದರೆ ಸಂಘಟನೆಗಳನ್ನು, ಧರ್ಮದ ಒಳಗಿನದ್ದಾದರೆ ಸಮಾಜವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರದೀಪ್ ಅವರ ಮೃತದೇಹವನ್ನು ಕೊಂಡೊಯ್ಯುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿ, ಆತ್ರಾಡಿಯಲ್ಲಿ ಸೊರಕೆಯವರ ಭಾಷಣ ನಡೆಯುತ್ತಿದೆ, ಧಿಕ್ಕಾರ ಕೂಗೋಣ ಎಂದು ಹೇಳಿರುವುದು ಆಘಾತಕಾರಿ ಪ್ರಚೋದನೆಗೆ ಸಾಕ್ಷಿಯಾಗಿದೆ ಎಂದರು.

ಪ್ರದೀಪ್ ಪೂಜಾರಿಯವರ ಸಾವಿನ ತಕ್ಷಣ ಕೆಲವು ರಣಹದ್ದುಗಳು ರಣರಂಗಕ್ಕೆ ಇಳಿದಿವೆ. ಅವರ ಮೇಲೆ ಅತ್ಯಾಚಾರದ ಆರೋಪವಿದ್ದಾಗ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಉದಯ್ ಶೆಟ್ಟಿಯವರ ಆಪ್ತರಾಗಿದ್ದರು. ಸುನೀಲ್ ಕುಮಾರ್ ಅವರ ಆಪ್ತರಾಗಿರುವ ಕಾರ್ಕಳದ ಐಟಿ ಸೆಲ್ ಸದಸ್ಯರು ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿ ತೇಜೋವಧೆ ಮಾಡಿದ್ದರು. ಜಾಮೀನು ಸಿಗದಂತೆ ನೋಡಿಕೊಂಡಿದ್ದರು. ಅವರು ಬಿಜೆಪಿ ಮತ್ತು ಸುನೀಲ್ ಕುಮಾರ್ ವಿರೋಧಿಯಾಗಿದ್ದು, ನಿರಂತರವಾಗಿ ಶಾಸಕರ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದುದೇ ಇದಕ್ಕೆ ಕಾರಣ ಎಂದು ಶುಭದ ರಾವ್ ಆರೋಪಿಸಿದರು.

ಆದರೆ, ಅವರ ಸಾವಿನ ಬಳಿಕ ಎಲ್ಲರಿಗೂ ಅವರು ಹಿಂದೂ ಕಾರ್ಯಕರ್ತರಾಗಿದ್ದಾರೆ. ಪ್ರದೀಪ್ ಸಾವಿನ ನಂತರ ಕುಂದಾಪುರದ ಗಿಳಿಯೊಂದರ ಪಂಚೇಂದ್ರಿಯಗಳು ಜಾಗೃತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರದೀಪ್ ಕೊಲೆಯನ್ನು ಕಾಂಗ್ರೆಸ್ ನಾಯಕರು ಮಾಡಿಸಿದ್ದಾರೆ ಎಂದು ನಮ್ಮ ನಾಯಕರ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ಅವರಿಗೆ ಶಾಸಕ ಸುನೀಲ್ ಕುಮಾರ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರದೀಪ್ ಸಾವಿನಲ್ಲಿ ರಾಜಕೀಯ ಲಾಭ ಪಡೆಯುವುದೇ ಉದ್ದೇಶವಾಗಿದೆ. ಕಾರ್ಕಳದಲ್ಲಿ ತನ್ನ ಎದುರು ಪ್ರಭಾವಿಯಾಗಿರುವ ವ್ಯಕ್ತಿಗಳ ಮೇಲೆ ಕೊಲೆ ಆರೋಪ ಹೊರಿಸುವುದು ಸುನೀಲ್ ಕುಮಾರ್ ಅವರ ಹಳೆಯ ಚಾಳಿಯಾಗಿದೆ. ಅಂದು ಸುಚೇತಾ ಶೆಟ್ಟಿ, ಇಂದು ಪ್ರದೀಪ್ ಪೂಜಾರಿ ಎಂದು ಅವರು ಹೇಳಿದರು.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಾರ್ಕಳ ತೆಳ್ಳಾರಿನ ದಿನೇಶ್ ಪೂಜಾರಿ ಸಾವಿನ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಶುಭದ ರಾವ್ ಆಗ್ರಹಿಸಿದರು.

ಪ್ರದೀಪ್ ಪೂಜಾರಿಯ ಸಾವಿನ ಬಗ್ಗೆ ಮಾತನಾಡುವ ಸುನೀಲ್ ಕುಮಾರ್, ತಮ್ಮ ಪಕ್ಷದ ಕಾರ್ಯಕರ್ತ ದಿನೇಶ್ ಪೂಜಾರಿ ಸಾವಿನ ಬಗ್ಗೆ ಮೌನವಾಗಿದ್ದಾರೆ. ಸಾವಿಗೆ ಮುನ್ನ ದಿನೇಶ್ ಪೂಜಾರಿ ರಾತ್ರಿ ಮೂರು ಗಂಟೆಗೆ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿ ಆಡಿಯೋ ಬಿಡುಗಡೆ ಮಾಡಿದ್ದರು. ಆಡಿಯೋದಲ್ಲಿ ಶಾಸಕರ ಕೆಲವು ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಬೆಳಗ್ಗೆ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದೇ ದಿನ ಸಂಜೆ ಮೂರು ಗಂಟೆಗೆ ದಿನೇಶ್ ಪೂಜಾರಿ ಸಂಶಯಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

50 ವರ್ಷದ ಹುಲಿವೇಷದ ಸಂಭ್ರಮವನ್ನು ಎರಡು ದಿನಗಳ ಹಿಂದೆ ಆಚರಿಸಿ ಲಕ್ಷಾಂತರ ರೂ. ಗೌರವ ಸಂಪಾದಿಸಿದ್ದ ಧೈರ್ಯದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ದಿನೇಶ್ ಮಾತನಾಡಿರುವ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರಿಗೆ ಪೊಲೀಸರು ಕರೆ ಮಾಡಿ ಅದನ್ನು ಡಿಲೀಟ್ ಮಾಡಿಸುತ್ತಿರುವುದೇಕೆ? ಆ ಆಡಿಯೋದಲ್ಲಿ ಅಂತಹ ಗುಟ್ಟಿನ ವಿಚಾರ ಏನಿದೆ? ಈ ಬಗ್ಗೆ ತನಿಖೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.

ದಿನೇಶ್ ಪೂಜಾರಿಗೂ ನ್ಯಾಯ ಸಿಗಬೇಕಲ್ಲವೇ? ಅವರ ಸಾವಿನ ಬಗ್ಗೆ ಶಾಸಕ ಸುನೀಲ್ ಕುಮಾರ್ ಮೌನವಾಗಿರುವುದೇಕೆ? ಬಿಜೆಪಿ ಐಟಿ ಸೆಲ್ ಕೂಡ ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದ ಅವರು, ದಿನೇಶ್ ಪೂಜಾರಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದರ್ಶನ್ ಬಂಗೇರ ಕಾಂತಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor