ವಚನಗಳ ಮೂಲಕ ಸನ್ಮಾರ್ಗಕ್ಕೆ ದಾರಿತೋರಿದವರು ಶಿವಶರಣರು: ಎಂ.ಎ. ಗಫೂರ್
ಉಡುಪಿ, ಜ.21: ಹನ್ನೆರಡನೆಯ ಶತಮಾನವನ್ನು ವಚನಗಳ ಕ್ರಾಂತಿಯುಗ ಎನ್ನಲಾಗುತ್ತಿದ್ದು, ಅಂದಿನ ಕಾಲಘಟ್ಟದಲ್ಲಿ ಶಿವಶರಣ- ಶರಣೆಯರು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪಶ್ಯತೆ, ಜಾತೀಯತೆ, ಅಸಮಾನತೆಯನ್ನು ತೊಲಗಿಸಲು ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ವಚನಗಳನ್ನು ರಚಿಸುವ ಮೂಲಕ ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.
ಬುಧವಾರ ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹನೀಯರಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ನೇರ ನಿಷ್ಠುರವಾದಿಯಾಗಿ ಸಮ ಸಮಾಜ ನಿರ್ಮಾಣವನ್ನು ಪ್ರತಿಪಾದಿಸಿದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿ ಉಳಿದಿದೆ. ಶಿವಶರಣರ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮಲ್ಲಿ ಅಡಗಿರುವ ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಕೊಂಡು ಸನ್ಮಾರ್ಗದ ಹಾದಿಯಲ್ಲಿ ಸಾಗಬಹುದು. ಶಿವಶರಣರು ಅಂದು ಪ್ರತಿಪಾದಿಸಿದ ವಚನ ಸಾರಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅಂಬಿಗರ ಚೌಡಯ್ಯ 12ನೆ ಶತಮಾನ ದಲ್ಲಿಯೇ ಜಾತೀಯತೆ, ಮೌಢ್ಯತೆ ವಿರೋಧಿಸಿದ್ದರು. ಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರರಾದ ಇವರ ತತ್ವ ಆದರ್ಶ ಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗೆಯೇ ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದುಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದ ಸಮಾಜ ಸುಧಾರಕರು ಮಹಾಯೋಗಿ ವೇಮನ ಎಂದರು.
ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 12ನೇ ಶತಮಾನದಲ್ಲಿ ವಚನ ಚಳುವಳಿಯ ಕ್ರಾಂತಿಯಿಂದಾಗಿ, ಲಿಂಗ ತಾರತಮ್ಯ, ಜಾತೀಯತೆ, ಅಂಧ ಆಚರಣೆಗಳನ್ನು ಮೀರಿ ಜನ ಸಾಮಾನ್ಯರಿಗೆ ಸಮಾನತೆಯನ್ನು ನೀಡಿದವರು ಬಸವಣ್ಣನವರು. ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಬದುಕಿನ ಸರಿ-ತಪ್ಪುಗಳನ್ನು ಅರಿತು ತಿದ್ದುಪಡಿ ಮಾಡಿಕೊಳ್ಳ ಬಹುದು ಎಂಬುದನ್ನು ತೋರಿಸಿಕೊಟ್ಟವರು ಅಂದಿನ ಕಾಲದ ವಚನಕಾರರು ಎಂದರು.
ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಚಿಕ್ಕಮಠ, ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ವರ್ಷಾ ಬಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಪೂರ್ಣಿಮಾ ವಂದಿಸಿದರು.