×
Ad

ತುಳು ಅಕಾಡೆಮಿಯಿಂದ ದೊಡ್ಡಣ್ಣ ಶೆಟ್ಟಿ ಜನ್ಮದಿನದ ಶತಮಾನೋತ್ಸವ ಆಚರಣೆ: ತಾರನಾಥ ಗಟ್ಟಿ

Update: 2026-01-05 20:26 IST

ಉಡುಪಿ, ಜ.5: ತುಳು ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ಕೊಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಜನ್ಮದಿನದ ಶತಮಾನೋತ್ಸವ ಈ ವರ್ಷ ಆಚರಿಸುತ್ತಿದ್ದು, ಅಕಾಡೆಮಿ ವತಿಯಿಂದ ಈ ಕುರಿತು ಕಾರ್ಯಕ್ರಮ ಹಮ್ಮಿಕೊಂಡು, ಅವರ ಪರಿಚಯ ಹಾಗೂ ನಾಟಕಗಳ ಕೃತಿಯನ್ನು ಹೊರ ತರಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಕೂಟ ಉಡುಪಿ ಇವುಗಳ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತುಳು ನಾಟಕ ನಮ್ಮ ಹಿರಿಯರಿಂದ ಚಳವಳಿ ರೂಪದಲ್ಲಿ ಬೆಳೆದುಬಂದಿದೆ. ದೊಡ್ಡಣ್ಣ ಶೆಟ್ಟಿ ಸಾಮಾಜಿಕ ಕಳಕಳಿ ಹಾಗೂ ಆಶಯದೊಂದಿಗೆ ನಾಟಕ ತಂಡವನ್ನು ಕಟ್ಟಿದರು. ಇಂದು ತುಳುನಾಟಕ ವ್ಯಾಪಾಕವಾಗಿ ವಿಸ್ತಾರಗೊಂಡಿದೆ. ಇದಕ್ಕೆ ನಮ್ಮ ಹಿರಿಯ ಪರಿಶ್ರಮವೇ ಕಾರಣ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಮಾತನಾಡಿದರು. ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್, ಕೆಮ್ತೂರು ಕುಟುಂಬದ ವಿಜಯ ಕುಮಾರ್ ಶೆಟ್ಟಿ, ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸಲಹೆಗಾರ ಉಡುಪಿ ವಿಶ್ವನಾಥ ಶೆಣೈ, ಉಪಾಧ್ಯಕ್ಷ ದಿವಾಕರ ಸನಿಲ್, ಶೋಭಾ ಶೆಟ್ಟಿ ಉಪಸ್ಥಿತರಿದ್ದರು.

ನಾಟಕ ಹಬ್ಬದ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ಕಲಾಮಂದಿರ ತಂಡದಿಂದ ಪಿಲಿ ನಾಟಕ ಪ್ರದರ್ಶನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News