×
Ad

ಕುಂದಾಪುರ| ಬಸ್-ಟಿಪ್ಪರ್ ಅಪಘಾತ ಪ್ರಕರಣ: ಮೂವರ ವಿರುದ್ಧ ಪ್ರಕರಣ ದಾಖಲು, ಇಬ್ಬರ ಬಂಧನ

Update: 2026-01-06 20:23 IST

ಕುಂದಾಪುರ: ತಲ್ಲೂರು ಮೂಲಕ ನೇರಳಕಟ್ಟೆ-ಆಜ್ರಿ-ಸಿದ್ದಾಪುರ ರಸ್ತೆಯ ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಟಿಪ್ಪರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.

ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ಬಂಧಿತ ಆರೋಪಿಗಳು. ಕೆಂಪು ಮಣ್ಣು ಜಾಗದ ಮಾಲಕ ಮಂಜುನಾಥ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಕೆಎಸ್‌ಆರ್‌ಟಿಸಿ ಮತ್ತು ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಿಂದ ಬಸ್ಸಿನಲ್ಲಿದ್ದ 39 ಮಂದಿ ಪ್ರಯಾಣಿಕರ ಪೈಕಿ 18 ಮಂದಿಗೆ ಗಾಯಗೊಂಡಿದ್ದು, ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಹಿತ ಮೂರು ಮಂದಿ ತೀವ್ರ ಗಾಯ ಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.

ಅಕ್ರಮ ಮಣ್ಣು ಸಾಗಾಟ: ಚಾಲಕ ಟಿಪ್ಪರ್‌ನಲ್ಲಿ ಮಣ್ಣು ಸಾಗಾಟದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಕೆಂಪು ಮಣ್ಣು ತುಂಬಿಸಿ ಕೊಂಡು ಕಿರಿದಾದ ರಸ್ತೆಯಲ್ಲಿ ಓಡಿಸಿರುವುದಾಗಿ ದೂರಲಾಗಿದೆ.

ಟಿಪ್ಪರ್ ಚಾಲಕ ಎದುರಿನಿಂದ ಬರುವ ವಾಹನಗಳಲ್ಲಿರುವ ಪ್ರಯಾಣಿಕರಿಗೆ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎಂಬ ಅರಿವಿದ್ದರೂ ಕೂಡ ವಿಮಾ ಪತ್ರ(ಇನ್ಸೂರೆನ್ಸ್), ಪರವಾನಿಗೆ ಇಲ್ಲದ ಟಿಪ್ಪರ್‌ನಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಐಸಿಯುನಲ್ಲಿ ಚಿಕಿತ್ಸೆ: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವರು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗದಲ್ಲಿರಿಸಲಾಗಿದೆ ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News