×
Ad

ಉಡುಪಿ: ಜೂನ್‌ನಲ್ಲಿ ಶೇ.50ರಷ್ಟು ಮಳೆ ಕೊರತೆ

ಆತಂಕ ಬೇಡ: ರೈತರಿಗೆ ಕೃಷಿ ಇಲಾಖೆ ಭರವಸೆ

Update: 2026-07-02 09:00 IST

ಸಾಂದರ್ಭಿಕ ಚಿತ್ರ (AI)

ಉಡುಪಿ : ಎಲ್ ನಿನೋ ಕುರಿತಂತೆ ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯ ಮಧ್ಯೆ ಮುಂಗಾರು ಮಳೆಯ ಮೊದಲ ತಿಂಗಳಿನಲ್ಲೇ ಉಡುಪಿ ಜಿಲ್ಲೆಯಲ್ಲಿ ಶೇ.50ರಷ್ಟು ಮಳೆ ಕೊರತೆ ಕಂಡುಬಂದಿದೆ. ಇದು ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತ ಬೆಳೆಯುವ ರೈತರ ಆತಂಕಕ್ಕೆ ಕಾರಣವಾಗಿದೆ.

ಈ ನಡುವೆ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿರುವುದು ಹಾಗೂ ಮುಂದಿನ 15 ದಿನಗಳವರೆಗೆ ಉತ್ತಮ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯ ರೈತರು ಆತಂಕಕ್ಕೊಳಗಾಗದೇ, ತಮ್ಮ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡದೇ ಎಂದಿನಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಈ ಬಾರಿ ಎಪ್ರಿಲ್-ಮೇ ತಿಂಗಳಿನಲ್ಲೇ ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಬೀಳದೇ ಶೇ.23ರಷ್ಟು ಕೊರತೆ ಕಾಣಿಸಿದ್ದರಿಂದ ಜೂನ್‌ನಲ್ಲಿ ಮುಂಗಾರು ಜಿಲ್ಲೆಗೆ ಕಾಲಿಡುವ ಸಂದರ್ಭದಲ್ಲಿ ನಡೆಯಬೇಕಾಗಿದ್ದ ನಾಟಿ ಪೂರ್ವ ಕೃಷಿ ಚಟುವಟಿಕೆ ಈ ಬಾರಿ ನಡೆದಿರಲಿಲ್ಲ. ಜೂನ್ ಮೊದಲ ವಾರದಲ್ಲೇ ಮುಂಗಾರು ರಾಜ್ಯ ಕರಾವಳಿಗೆ ಕಾಲಿರಿಸಿದೆ ಎಂದು ಹವಾಮಾನ ತಜ್ಞರು ಘೋಷಿಸಿದ ಬಳಿಕವೂ ಜಿಲ್ಲೆಯಲ್ಲಿ ಮುಂಗಾರು ಮಳೆಯ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ.

ಈ ಬಾರಿ ಜೂನ್ ಒಂದರಿಂದ 30ರವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆ ಕೇವಲ 558 ಮಿ.ಮೀ.ಮಾತ್ರ. ಈ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 1106 ಮಿ.ಮೀ. ಆಗಿದೆ. ಅಂದರೆ ಜಿಲ್ಲೆಗೆ ಶೇ.50ರಷ್ಟು ಮಳೆಯ ಕೊರತೆ ಈ ಬಾರಿ ಕಂಡುಬಂದಿದೆ. ಇದರಿಂದ ಜೂನ್‌ನಲ್ಲಿ ತುಂಬಿ ತುಳುಕಬೇಕಿದ್ದ ಬಾವಿ, ಕೆರೆ, ಕೊಳ, ಹಳ್ಳ, ತೋಡುಗಳಲ್ಲಿ ಈ ಬಾರಿ ತಳದಲ್ಲಿ ಮಾತ್ರ ನೀರು ಕಂಡುಬರುತ್ತಿದೆ. ಬಿರುಸಿನ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಬೇಕಿದ್ದ ರೈತರು ಆಕಾಶ ದಿಟ್ಟಿಸುವಂತಾಗಿದೆ. ಗದ್ದೆಗಳಲ್ಲಿ ಕೃಷಿ ಕಾರ್ಮಿಕರು ವಿರಳವಾಗಿ ಕಂಡುಬರುತ್ತಿದ್ದಾರೆ. ಯಂತ್ರಗಳ ಸದ್ದಂತೂ ಕೇಳಿಸುತ್ತಲ್ಲೇ ಇಲ್ಲ.

ಇದಕ್ಕೆ ವ್ಯತಿರಿಕ್ತವಾಗಿ 2025ರಲ್ಲಿ ಜೂನ್ 1ರಿಂದ 30ರವರೆಗೆ ಅಂದರೆ ಮುಂಗಾರು ಮಳೆಯ ಮೊದಲ ಒಂದು ತಿಂಗಳು ರಾಜ್ಯದಲ್ಲೇ ಅತ್ಯಧಿಕ ಮಳೆ ಉಡುಪಿ ಜಿಲ್ಲೆಯಲ್ಲಿ ಸುರಿದಿತ್ತು. ಈ ಅವಧಿಯ ವಾಡಿಕೆ ಮಳೆ 1,105.5 ಮಿ.ಮೀ.ನ್ನು ಮೀರಿ ಈ ತಿಂಗಳು ಒಟ್ಟು 1,162.8 ಮಿ.ಮೀ. ಮಳೆ ಸುರಿದಿತ್ತು. ಈ ಮೂಲಕ ಶೇ.5ರಷ್ಟು ಅಧಿಕ ಮಳೆ ಬಿದ್ದಿತ್ತು. ಇದರಿಂದ ಕೃಷಿ ಚಟುವಟಿಕೆಗಳೆಲ್ಲವೂ ಅತೀ ಬಿರುಸಿನಿಂದ ನಡೆದು ರೈತ ಖುಷಿ ಖುಷಿಯಾಗಿದ್ದ.

ಈ ವರ್ಷ ಜನವರಿ ಒಂದರಿಂದ ಜೂನ್ 30ರವರೆಗೆ ಜಿಲ್ಲೆಯಲ್ಲಿ ಬಂದ ಮಳೆಯ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ಅಲ್ಲೂ ಶೇ.44ರಷ್ಟು ಕೊರತೆ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 1,163 ಮಿ.ಮೀ. ವಾಡಿಕೆ ಮಳೆಯಾಗಿದ್ದ ಈ ಸಲ ಜಿಲ್ಲೆಯಲ್ಲಿ ಬಂದಿರುವುದು 727 ಮಿ.ಮೀ. ಮಳೆ ಮಾತ್ರ. ಅದೇ 2025ರಲ್ಲಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 2101.6ಮಿ.ಮೀ. ಮಳೆ ಬಿದ್ದು ಶೇ.61ರಷ್ಟು ಅಧಿಕ ಮಳೆಯಾಗಿತ್ತು ಎಂದು ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರದ ಅಂಕಿಅಂಶಗಳು ತಿಳಿಸುತ್ತವೆ.

ಈ ವರ್ಷದ ಜೂನ್ ತಿಂಗಳ ಮಳೆಯನ್ನೇ ತೆಗೆದುಕೊಂಡರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ತಾಲೂಕು ಎನಿಸಿದ್ದ ಹೆಬ್ರಿ ತಾಲೂಕಿನಲ್ಲಿ ಈ ಬಾರಿ ಅತೀ ಹೆಚ್ಚು ಶೇ.60ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಇದು ಒಂದರ್ಥದಲ್ಲಿ ಎಚ್ಚರಿಕೆ ಗಂಟೆಯೂ ಹೌದು. ಹೆಬ್ರಿಯಲ್ಲಿ 1,315 ಮಿ.ಮೀ.ಗಳ ವಾಡಿಕೆ ಮಳೆಯ ಬದಲು ಈ ಬಾರಿ ಬಿದ್ದಿರುವುದು ಕೇವಲ 531 ಮಿ.ಮೀ. ಮಳೆ ಮಾತ್ರ.

ಉಳಿದಂತೆ ಬ್ರಹ್ಮಾವರದಲ್ಲಿ ಶೇ.54ರಷ್ಟು ಮಳೆ ಕೊರತೆ (ವಾಡಿಕೆ1,018, ಬಿದ್ದಿರುವುದು 468 ಮಿ.ಮೀ.) ಕಂಡುಬಂದಿದೆ. ಕಾರ್ಕಳದಲ್ಲಿ ಶೇ.49 (1,049-538), ಕುಂದಾಪುರ ಶೇ.41 (993-581), ಉಡುಪಿ ಶೇ.49 (1,033-525), ಬೈಂದೂರು ಶೇ.43 (1,137-649) ಹಾಗೂ ಕಾಪು ಶೇ.44 (1,000-559)ರಷ್ಟು ಕೊರತೆ ಕಂಡುಬಂದಿದೆ.

ಇನ್ನು ಜನವರಿಂದ ಜೂನ್‌ವರೆಗೆ ಮಳೆಯ ಪ್ರಮಾಣವನ್ನು ಪರಿಗಣಿಸಿದಾಗಲೂ ಜಿಲ್ಲೆಯ ಬೈಂದೂರಿನಲ್ಲಿ ಶೇ.40, ಕುಂದಾಪುರದಲ್ಲಿ ಶೇ.40, ಉಡುಪಿಯಲ್ಲಿ ಶೇ.43, ಬೈಂದೂರಿನಲ್ಲಿ ಶೇ.40, ಬ್ರಹ್ಮಾವರ ದಲ್ಲಿ ಶೇ.53, ಕಾಪುವಿನಲ್ಲಿ ಶೇ.38 ಹಾಗೂ ಹೆಬ್ರಿಯಲ್ಲಿ ಶೇ.54ರಷ್ಟು ಮಳೆಯ ಕೊರತೆ ಕಂಡುಬಂದಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದೇ ರೀತಿ 2024ರಲ್ಲಿ ಜಿಲ್ಲೆಯಲ್ಲಿ ಶೇ.6ರಷ್ಟು ಮಾತ್ರ ಮಳೆಯ ಕೊರತೆ ಕಂಡುಬಂದಿತ್ತು.

ಕೃಷಿ ಚಟುವಟಿಕೆ ವೇಗ ಕುಂಠಿತ: ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯ ವೇಗ ಕುಂಠಿತಗೊಂಡಿದೆ ಎಂಬುದನ್ನು ಒಪ್ಪಿಕೊಳ್ಳುವ ಕೃಷಿ ಇಲಾಖೆಯ ಅಧಿಕಾರಿಗಳು, ಆದರೆ ಇದರಿಂದ ಈಗಲೇ ಆತಂಕಕ್ಕೊಳ ಗಾಗಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ. ಕಳೆದೆರಡು ದಿನಗಳಿಂದ ಮಳೆ ಬಿರುಸು ಪಡೆಯುತಿದ್ದು, ಮುಂದಿನ 15 ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ರೈತರು ತಮ್ಮ ಚಟುವಟಿಕೆ ಮುಂದುವರಿಸುವಂತೆ ಸೂಚಿಸಿದ್ದಾರೆ.

ಮಳೆ ಸುಮಾರು ಮೂರು ವಾರ ವಿಳಂಬವಾಗಿರುವುದರಿಂದ ಸಸಿ ಮಡಿ ತಯಾರಿಯು ವಿಳಂಬವಾಗುತ್ತಿದೆ. ಆದರೂ ಕೃಷಿಕರು ತಮ್ಮ ಮಾಮೂಲು ಬೀಜವನ್ನೇ ಈ ಬಾರಿಯೂ ಬಿತ್ತಬಹುದು. ಅದನ್ನು ಬದಲಿಸಬೇಕಾದ ಅಗತ್ಯವಿಲ್ಲ. ಕೃಷಿ ಪದ್ಧತಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕಿಲ್ಲ ಎಂದು ಅವರು ಸಲಹೆ ನೀಡುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News