ಉಡುಪಿ: ಪಿಂಚಣಿಗಾಗಿ 2 ವರ್ಷಗಳಿಂದ ವೃದ್ಧರೊಬ್ಬರಿಂದ ಕಚೇರಿ ಅಲೆದಾಟ !
► ಇನ್ನೂ ಬಾರದ ಕುಟುಂಬ ಪಿಂಚಣಿ ► ಅಧಿಕಾರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ
ಉಡುಪಿ, ಜ.8: ಕಾಪು ಪೊಲಿಪು ನಿವಾಸಿ ವಾಸು ಕೋಟ್ಯಾನ್ (85) ತನಗೆ ನ್ಯಾಯವಾಗಿ ಸಿಗಬೇಕಾದ ಕುಟುಂಬ ಪಿಂಚಣಿಯನ್ನು ಪಡೆಯಲು ಕಳೆದ 2-3 ವರ್ಷಗಳಿಂದ ವಿವಿಧ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದು ಇದೀಗ ನ್ಯಾಯ ಪಡೆಯಲು ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
ಉಡುಪಿ ಕುಂಜಿಬೆಟ್ಟುವಿನ ವೈಕುಂಠ ಬಾಳಿಗ ಕಾನೂನು ವಿದ್ಯಾಲಯ ದಲ್ಲಿರುವ ಪ್ರತಿಷ್ಠಾನದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್ ಈ ಕುರಿತು ಮಾಹಿತಿ ನೀಡಿದ್ದು, ವಾಸು ಕೋಟ್ಯಾನ್ ಅವರಿಗೆ ನ್ಯಾಯ ಸಿಗುವತನಕ ಸಂಪೂರ್ಣ ಬೆಂಬಲ ನೀಡಲು ಪ್ರತಿಷ್ಠಾನ ಬದ್ಧವಾಗಿದೆ ಎಂದರು.
ಪ್ರಕರಣದ ವಿವರ: ಸುರತ್ಕಲ್ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯಲ್ಲಿ 36 ವರ್ಷಗಳ ಕಾಲ ದುಡಿದ ವಾರಿಜಾ ಕೋಟ್ಯಾನ್ 2013ರ ಡಿಸೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದಿದರು. ಸುಮಾರು 10 ವರ್ಷಗಳ ಕಾಲ ನಿವೃತ್ತಿ ವೇತನ ಪಡೆದ ವಾರಿಜಾ 2023ರ ಜನವರಿ ತಿಂಗಳಲ್ಲಿ ನಿಧನರಾದರು.
ನಿಯಮಾನುಸಾರ ಕುಟುಂಬ ಪಿಂಚಣಿಗೆ ಅರ್ಹರಾಗಿದ್ದ ಅವರ ಪತಿ ವಾಸು ಕೋಟ್ಯಾನ್, 2023ರ ಮಾ.23ರಂದು ಕುಟುಂಬಪಿಂಚಣಿಗೆ ಅವಶ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಮಂಗಳೂರಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಅಕೌಂಟೆಂಟ್ ಜನರಲ್ ಅವರಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಯಾವುದೇ ಮಾಹಿತಿ ಬಾರದೆ ಇದ್ದಾಗ ಬೆಂಗಳೂರಿಗೆ ಅಲೆದಾಡಿದರು. ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಾಸು ಕೋಟ್ಯಾನ್, ಒಟ್ಟು ಮೂರು ಬಾರಿ ಅರ್ಜಿ ಸಲ್ಲಿಸಿದರು. ಈ ಅರ್ಜಿ ಗಳೊಂದಿಗೆ ಹೆಂಡತಿಯ ಮರಣಪತ್ರ, ಪಿಂಚಣಿ ಮಂಜೂರು ಪತ್ರದ ಮೂಲಪ್ರತಿ ಸಹಿತ ಎಲ್ಲ ದಾಖಲೆಗಳನ್ನು ಕಳುಹಿಸಿದ್ದರು. ಈವರೆಗೆ ಏಳು ಬಾರಿ ನೆನೆಪೋಲೆಗಳನ್ನು ಬರೆದಿದ್ದಾರೆ. ಹೆಚ್ಚಿನೆಲ್ಲ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧೀಕಾ ರಿಗಳ ಶಿಫಾರಸಿ ನೊಂದಿಗೆ ಅಕೌಂಟ್ ಜನರಲ್ ಕಚೇರಿಗೆ ಕಳುಹಿಸಿದ್ದಾರೆ. ಆದರೆ ಇದು ಯಾವುದಕ್ಕೂ ಉತ್ತರ ಇಲ್ಲ ಎಂದು ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.
ವಾಸು ಕೋಟ್ಯಾನ್ 2025ರ ಜನವರಿ ತಿಂಗಳಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ತಲುಪಿದರು. ಕೂಡಲೇ ಪ್ರತಿಷ್ಠಾನವು ಈ ಎಲ್ಲಾ ವಿಚಾರಗಳನ್ನು ಮಹಾಲೇಖಪಾಲರ ಗಮನಕ್ಕೆ ತಂದಿತು. ಈ ಕುರಿತು ಪ್ರತಿಷ್ಠಾನ ಸಾಕಷ್ಟು ಪ್ರಯತ್ನ ಪಟ್ಟರೂ ಈವರೆಗೆ ಅವರಿಗೆ ಪಿಂಚಣಿ ಬಂದಿಲ್ಲ ಎಂದು ಅವರು ಆರೋಪಿಸಿದರು.
ಇದೀಗ ನಡೆದಾಡಲು ಪ್ರಯಾಸ ಪಡುತ್ತಿರುವ ಹಿರಿಯ ಜೀವಕ್ಕೆ ಪಿಂಚಣಿ ಸಿಗುವ ತನಕ ಬೆಂಬಲ ನೀಡಲು ಪ್ರತಿಷ್ಠಾನವು ಬದ್ಧವಾಗಿದೆ. ಈ ಎಲ್ಲಾ ವಿವರಗಳನ್ನು ಕೇಂದ್ರ ಸರಕಾರದ ಅರ್ಥಿಕ ಸಚಿವಾಲಯದ ಗಮನಕ್ಕೆ ತಂದಿದ್ದು ವಾಸು ಕೋಟ್ಯಾನರಿಗೆ ನ್ಯಾಯ ನೀಡುವಂತೆ ಆಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಾಸು ಕೋಟ್ಯಾನ್, ಪ್ರತಿಷ್ಠಾನದ ಅನಿಲ್ ದೇವಾಡಿಗ, ಶಶಾಂಕ್, ರಿಷಿ ಭಾರಧ್ವಾಜ್ ಉಪಸ್ಥಿತರಿದ್ದರು.