ಉಡುಪಿ | ಡಿ.2ರಂದು ಕಾಂಗ್ರೆಸ್‌ನಿಂದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ
ಉಡುಪಿ, ನ.29: ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರದೊಂದಿಗೆ ಡಿ,2ರಂದು ಬೆಳಗ್ಗೆ 10:30ಕ್ಕೆ ಅಜ್ಜರಕಾಡಿನ ಪುರಭವನದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ನಡೆಯಲಿದೆ.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100ರ ಸಂಭ್ರಮದ ಸವಿನೆನಪಿಗಾಗಿ ಈ ಕಾರ್ಯಕ್ರಮ ರಾಜ್ಯದ ವಿವಿಧೆಡೆ ಆಯೋಜಿಸಲಾಗಿದೆ. ಆ ಪ್ರಯುಕ್ತ ಜಿಲ್ಲಾ ಪ್ರಚಾರ ಸಮಿತಿಗಳ ಆಶ್ರಯದಲ್ಲಿ ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತಿದ್ದು, ಡಿಸೆಂಬರ್ ತಿಂಗಳ ಕೊನೆಯವರೆಗೆ ಕರ್ನಾಟಕದ ಎಲ್ಲಾ 35 ಜಿಲ್ಲೆಗಳಲ್ಲೂ ನಡೆಸಲಾಗುವುದು ಎಂದು ಅವರು ಹೇಳಿದರು.
ಗಾಂಧೀಜಿ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ ಮತ್ತು ಸಂವಿಧಾನದ ಕುರಿತು ಹಾಗೂ ಕೇಂದ್ರದ ಬಿಜೆಪಿ ಸರಕಾರ ಚುನಾವಣಾ ಆಯೋಗದ ಸಹಕಾರದಿಂದ ನಡೆಸುತ್ತಿರುವ ’ಓಟ್ ಚೋರಿ’ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಉಡುಪಿ ಜಿಲ್ಲೆಯ ಪ್ರಚಾರ ಸಮಿತಿಯ ಉಸ್ತುವಾರಿ ಕಿಮ್ಮನೆ ರತ್ನಾಕರ್, ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ, ಮುಖ್ಯ ಸಂಯೋಜಕ ಚಲನಚಿತ್ರ ನಟ, ನಿರ್ದೇಶಕ ಎಸ್.ನಾರಾಯಣ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರ್, ಮಾಜಿ ಶಾಸಕ ಗೋಪಾಲ್ ಪೂಜಾರಿ, ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಸುಮಾರು 1,500ರಷ್ಟು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ಹರೀಶ್ ಕಿಣಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಪುತ್ರನ್, ಪ್ರಚಾರ ಸಮಿತಿಯ ಕಾಪು ಬ್ಲಾಕ್ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್, ಉಡುಪಿ ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಸುಮನಾ ಮೊಳಹಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.