ಉಡುಪಿ | ಡಿ.14ರಂದು ಶೀರೂರು ಪರ್ಯಾಯದ ಧಾನ್ಯ ಮುಹೂರ್ತ
ಉಡುಪಿ, ಡಿ.11: 2026ರ ಜ.18ರಂದು ನಡೆಯುವ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರ ಪ್ರಥಮ ಪರ್ಯಾಯದ ಪೂರ್ವ ಸಿದ್ಧತೆಗಳಲ್ಲಿ ಕೊನೆಯದಾದ ಧಾನ್ಯ ಮುಹೂರ್ತ ಡಿ.14ರ ರವಿವಾರ ಮುಂಜಾನೆ 7:45ಕ್ಕೆ ನಡೆಯಲಿದೆ ಎಂದು ಶೀರೂರು ಮಠದ ದಿವಾನರಾದ ಡಾ.ಉದಯ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ರಥಬೀದಿಯಲ್ಲಿರುವ ಶೀರೂರು ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪರ್ಯಾಯ ಅವಧಿಯಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ಉಣಬಡಿಸಲು ಅಕ್ಕಿಗಾಗಿ ಭತ್ತದೊಂದಿಗೆ ಬೇಳೆಕಾಳುಗಳನ್ನು ಸಂಗ್ರಹಿಸಿಡುವುದೇ ಈ ಮುಹೂರ್ತದ ಉದ್ದೇಶ ಎಂದರು.
ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಜ.18ರ ಬೆಳಗಿನ ಜಾವ ಸರ್ವಜ್ಞ ಪೀಠಾರೋಹಣ ಮಾಡಿ ಶ್ರೀಕೃಷ್ಣಪೂಜಾ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರಗಳ ತೀರ್ಥ ಯಾತ್ರೆಯಲ್ಲಿರುವ ಶ್ರೀಗಳು ಜನವರಿ ಮೊದಲ ವಾರ ಪುರಪ್ರವೇಶ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮಧುಕರ ಮುದ್ರಾಡಿ, ನಂದನ್ ಜೈನ್ ಹಾಗೂ ಮೋಹನ ಭಟ್ ಉಪಸ್ಥಿತರಿದ್ದರು.