ಉಡುಪಿ | ಏಡ್ಸ್ ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಡಿಎಚ್‌ಓ ಕರೆ
ವಿಶ್ವ ಏಡ್ಸ್ ದಿನಾಚರಣೆ
ಉಡುಪಿ, ಡಿ.6: ಏಡ್ಸ್ ನಿಯಂತ್ರಣದಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವ ಜನತೆ ಕ್ಷಣಿಕ ಸುಖಕ್ಕೆ ಬಲಿಯಾಗದೇ ಏಡ್ಸ್ ರೋಗದ ಕುರಿತು ಅರಿವು ಹೊಂದುವುದರ ಜೊತೆಗೆ ಸಾರ್ವಜನಿಕರಿಗೆ, ರೋಗಿಗಳಿಗೆ ಏಡ್ಸ್ ರೋಗ ಹರಡುವ ಕುರಿತು ಹಾಗೂ ತಡೆಗಟ್ಟಲು ಇರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಜಿ. ಹುಬ್ಬಳ್ಳಿ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವಿದ್ಯಾರತ್ನ ಕಾಲೇಜ್ ಆಫ್ ನರ್ಸಿಂಗ್, ನ್ಯೂ ಸಿಟಿ ಕಾಲೇಜ್ ಆಫ್ ನರ್ಸಿಂಗ್, ಮುನಿಯಾಲು ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸಾಯನ್ಸ್, ಗಾರ್ಡ್ ಸಂಸ್ಥೆ, ದೀಪಜ್ಯೋತಿ ನೆಟ್‌ವರ್ಕ್, ಆಸರೆ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಹಾಗೂ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಅಂಬಲಪಾಡಿಯ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆ ಪ್ರಗತಿಸೌಧದ ಸಭಾಂಗಣದಲ್ಲಿ ನಡೆದ ʼವಿಶ್ವ ಏಡ್ಸ್ ದಿನದ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮʼವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತ ರಕ್ತದ ವರ್ಗಾವಣೆ ಅಥವಾ ಸೋಂಕಿತ ವ್ಯಕ್ತಿಗೆ ಬಳಸಿದ ಚುಚ್ಚುಮದ್ದಿನ ಹಂಚಿಕೆ ಮೂಲಕ ಎಚ್‌ಐವಿ ಸೋಂಕು ಹರಡುತ್ತದೆ. ಈ ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳಿದ್ದು, ಇದನ್ನು ನಿವಾರಿಸಲು ಮತ್ತು ಸಮಾಜದಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಮನುಷ್ಯ ತನ್ನ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡಾಗ ಮಾತ್ರ ಹೆಚ್‌ಐವಿ, ಏಡ್ಸ್‌ನಿಂದ ದೂರ ಉಳಿಯಲು ಸಾಧ್ಯ. ಏಡ್ಸ್ ಕಾಯಿಲೆಗೆ ಒಳಗಾದವರು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಎಲ್ಲರೂ ಅವಕಾಶ ಮಾಡಿಕೊಡಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸ್‌ಂಸ್ಥೆ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜವಾಬ್ದಾರಿಯುತ ಯುವ ಜನಾಂಗ ಹೆಚ್‌ಐವಿ ಏಡ್ಸ್ ಅನ್ನು ಹೇಗೆ ನಿಯಂತ್ರಿಸಲು ಸಾಧ್ಯ, ಎಚ್ಚರಿಕೆ ಕ್ರಮಗಳು, ಸಂಸ್ಕಾರಯುಕ್ತ ಜೀವನ ಸಾಗಿಸುವ ಕುರಿತು, ಆರೋಗ್ಯದ ಮಹತ್ವದ ಬಗ್ಗೆ ವಿವರಿಸಿ ಹೇಳಿದರು. ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಚ್‌ಐವಿ/ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು. ಶ್ರೀಬಸವೇಶ್ವರ ವೀರಗಾಸೆ ಜಾನಪದ ಕಲಾತಂಡ ಅರೆಕೆರೆ, ಭದ್ರಾವತಿ ಇವರು ವೀರಗಾಸೆ ಪ್ರದರ್ಶನದ ಮೂಲಕ ಯುವಜನತೆಯಲ್ಲಿ ಜಾಗೃತಿ ಮೂಡಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ನಾಗರಾಜ ಶೆಟ್ಟಿ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಚಿದಾನಂದ ಸಂಜು ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ರಾವ್ ಸ್ವಾಗತಿಸಿ, ಮಂಜುನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ವಂದಿಸಿದರು.
ಇದಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಅಂಬಲಪಾಡಿ ಪ್ರಗತಿಸೌಧದವರೆಗೆ ನಡೆದ ಜಾಥಾ ಕಾರ್ಯಕ್ರಮಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ರಾಜು ಪೂಜಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಜಿ ಹುಬ್ಬಳ್ಳಿ ಚಾಲನೆ ನೀಡಿದರು.