ಗ್ಯಾರಂಟಿ ಸಮಾವೇಶಕ್ಕೆ ಗ್ರಾಪಂ ಅನುದಾನ ಬಳಕೆಗೆ ಉಡುಪಿ ಜಿಲ್ಲೆಯ ಶಾಸಕರ ವಿರೋಧ
ಉಡುಪಿ, ನ.21: ಉಡುಪಿಯಲ್ಲಿ ನ.24ರಂದು ನಡೆಯುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಗ್ರಾಪಂ ಅನುದಾನ ಬಳಕೆ ಮಾಡಿರುವ ಕ್ರಮಕ್ಕೆ ಉಡುಪಿ ಜಿಲ್ಲೆಯ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸಮಾವೇಶಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಈ ಸಮಾವೇಶಕ್ಕೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳನ್ನು ಕರೆ ತರುವ ಬಗ್ಗೆ ಮತ್ತು ಉಟೋಪಚಾರಗಳ ವ್ಯವಸ್ಥೆಗೆ ತಗಲುವ ವೆಚ್ಚವನ್ನು ಆಯಾ ಗ್ರಾಪಂಗಳ ಸ್ವಂತ ನಿಧಿಯಿಂದ ಗರಿಷ್ಠ 25ಸಾವಿರ ರೂ. ಮಿತಿ ಒಳಗೆ ಭರಿಸುವ ಕುರಿತು ಜಿಪಿ ಸಿಇಓ ಹೊರಡಿಸಿರುವ ಆದೇಶಕ್ಕೆ ನಮ್ಮ ವಿರೋಧ ಇದೆ ಎಂದರು.
ಈ ಆದೇಶ ಕಾನೂನು ಬಾಹಿರವಾಗಿದ್ದು, ಇದು ಸರಕಾರಿ ಆದೇಶ ಅಲ್ಲ. ಈ ಸಂಬಂಧ ಜಿಲ್ಲೆಯ ಐದು ಶಾಸಕರು ಸಿಇಓಗೆ ಪತ್ರ ಬರೆದು, ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಹೊರಡಿಸಿರುವ ಈ ಆದೇಶವನ್ನು ಕೂಡಲೇ ವಾಪಾಸ್ಸು ಪಡೆಯುವಂತೆ ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಒಟ್ಟು 155 ಗ್ರಾಪಂಗಳು ತಲಾ 25ಸಾವಿರ ರೂ.ನಂತೆ ಒಟ್ಟು 38.75ಲಕ್ಷ ರೂ. ಸಂಗ್ರಹ ಆಗುತ್ತದೆ. ಪ್ರಸ್ತುತ ಬರಗಾಲ, ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಸರಕಾರ ಈ ಸಮಾವೇಶಕ್ಕೆ ಗ್ರಾಪಂನ ಸ್ವಂತ ಹಣ ಬಳಕೆ ಮಾಡುತ್ತಿರುವುದು ಸರಿಯಲ್ಲ. ಗ್ರಾಪಂಗಳು ಕೋಟ್ಯಂತರ ರೂ. ವಿದ್ಯುತ್ ಬಿಲ್ ಪಾವತಿ, ಸಿಬ್ಬಂದಿ ವೇತನ ಸೇರಿ ದಂತೆ ವಿವಿಧ ನಿರ್ವಹಣೆಗೆ ಅನುದಾನದ ಕೊರತೆ ಎದುರಿಸುತ್ತಿದೆ. ಹೆಚ್ಚಿನ ಗ್ರಾಪಂಗಳಲ್ಲಿ ಹುಲ್ಲಿನ ಕಟಾವು ನಡೆದಿಲ್ಲ. ಹೊಸ ಪೈಪ್‌ಲೈನ್ ಸೇರಿದಂತೆ ಹಲವು ಮೂಲಭೂತ ಅಗತ್ಯಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ಯಾವುದು ಆದ್ಯತೆ ಎಂಬುದು ಸ್ಪಷ್ಟ ಆಗಬೇಕಾಗಿದೆ ಎಂದು ಅವರು ಹೇಳಿದರು.
ಪ್ರತಿವಾರ ನಡೆಯುವ ಪ್ರಜಾಸೇವೆಗೆ ಆ.6ರಂದು ಸರಕಾರ ಸುತ್ತೋಲೆ ಹೊರಡಿಸಿ ಸರಕಾರದ ಅನುದಾನ ಬಳಸು ವಂತೆ ತಿಳಿಸಿತ್ತು. ಇದೀಗ ನ.19 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಿ ಪ್ರಜಾಸೇವೆಗೆ ಅನುದಾನ ವನ್ನು ಗ್ರಾಪಂ ಹಾಗೂ ತಾಪಂಗಳಿಂದ ಬಳಸಿಕೊಳ್ಳಲು ಸೂಚಿಸಿದೆ. ಇದು ಸರಕಾರದ ದಿವಾಳಿತನವನ್ನು ಸೂಚಿಸುತ್ತದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಪಸ್ಥಿತರಿದ್ದರು.