ಉಡುಪಿ: ಕೃಷ್ಣ ಮಠದಲ್ಲಿನ್ನು ವಸ್ತ್ರಸಂಹಿತೆ ಕಡ್ಡಾಯ
ಉಡುಪಿ, ಜ.19: ರವಿವಾರ ಮುಂಜಾನೆ ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ಮೊದಲ ಬಾರಿ ಸರ್ವಜ್ಡ ಪೀಠಾರೋಹಣ ಮಾಡಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಕೃಷ್ಣ ಮಠವನ್ನು ಪ್ರವೇಶಿಸುವ ಭಕ್ತರಿಗೆ ವಸ್ತ್ರ ಸಂಹಿತೆ (ಡ್ರೆಸ್ ಕೋಡ್)ಯನ್ನು ಕಡ್ಡಾಯಗೊಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮಹಾಪೂಜೆ ನಡೆಯುವ ಅಪರಾಹ್ನದವರೆಗೆ ಜಾರಿಯಲ್ಲಿದ್ದ ವಸ್ತ್ರಸಂಹಿತೆಯನ್ನು ಇದೀಗ ದಿನ ಪೂರ್ತಿ ಜಾರಿ ಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕೃಷ್ಣ, ಮುಖ್ಯಪ್ರಾಣರ ದರ್ಶನಕ್ಕಾಗಿ ಮಠ ಪ್ರವೇಶಿ ಸುವ ಮುನ್ನ ಪುರುಷರು ಅಂಗಿಯನ್ನು ತೆಗೆಯಬೇಕಾಗಿದೆ. ಬರ್ಮುಡ, ಹಾಫ್ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಶಾಲನ್ನು ಧರಿಸಿ ಮಠದೊಳಗೆ ಬರಬಹುದಾಗಿದೆ ಎಂದು ಶೀರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ಸ್ವಾಮೀಜಿ ಆದೇಶವನ್ನು ಪ್ರಕಟಿಸುತ್ತಾ ತಿಳಿಸಿದರು.
ಕೃಷ್ಣ ಮಠಕ್ಕೆ ಆಗಮಿಸುವ ಮಹಿಳಾ ಭಕ್ತರೂ ಸಹ ಸಭ್ಯ ಉಡುಪುಗಳನ್ನು ಧರಿಸಬೇಕು.ಜೀನ್ಸ್ ಪ್ಯಾಂಟ್, ಟಿಶರ್ಟ್, ಸ್ಲೀವ್‌ಲೆಸ್ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸಂಜೆಯ ಬಳಿಕವೂ ಕೃಷ್ಣನಿಗೆ ತೊಟ್ಟಿಲು ಪೂಜೆ ಸೇರಿದಂತೆ ಹಲವು ಪೂಜೆಗಳೊಂದಿಗೆ ಸದಾ ವೇದಘೋಷಗಳು ನಡೆಯುತ್ತಿರುವುದರಿಂದ ಕೃಷ್ಣ ಭಕ್ತರಾಗಿ ಎಲ್ಲರೂ ಮಠಕ್ಕೆ ಆಗಮಿಸಬೇಕು ಎಂದು ಡಾ.ಸರಳತ್ತಾಯ ತಿಳಿಸಿದ್ದಾರೆ.