Udupi | ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ, ಹೈಡ್ರೋಗಾಂಜಾ ಸಹಿತ ಮೂವರ ಬಂಧನ
ಉಡುಪಿ, ಜು.19: ಉಡುಪಿಯ ಶಿವಳ್ಳಿ ಗ್ರಾಮದ ಬುಡ್ನಾರ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಪೌಡರ್, ಎಂ.ಡಿ.ಎಂ.ಎ. ಟ್ಯಾಬ್ಲೆಟ್, ಹೈಡ್ರೋ ಗಾಂಜಾಗಳನ್ನು ಹೊಂದಿದ್ದ ಹಾಗೂ ಅವುಗಳನ್ನು ಕಾಪು, ಉಡುಪಿ, ಮಣಿಪಾಲ, ಕಾರ್ಕಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಾವರ ಪಿತ್ರೋಡಿಯ ವಿಜಯ ಪೂಜಾರಿ (36), ಕಾರ್ಕಳ ಕುಕ್ಕಂದೂಹು ಹಾರ್ಜಿಡ್ಡು ಪಿ.ಎ.ಮುಹಮ್ಮದ್ ಶಮ್ಮಾಸ್(24) ಹಾಗೂ ಕಾರ್ಕಳ ತಾಲೂಕು ಕುಂಟಿಬೈಲು ಮಿಯಾರು ಗ್ರಾಮದ ಆಕಾಶ್ ಶೆಟ್ಟಿ (20) ಬಂಧಿತ ಆರೋಪಿಗಳು. ಆರೋಪಿಗಳಿಂದ 04 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ, ಎಂ.ಡಿ.ಎಂ.ಎ ಟ್ಯಾಬ್ಲೆಟ್, 3 ಗ್ರಾಂ ಗಾಂಜಾ ಅಲ್ಲದೇ ಅವುಗಳ ಸಾಗಾಟಕ್ಕೆ ಬಳಸಿದ ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ, ಉಡುಪಿ ಸಂಚಾರ ಠಾಣೆಯ ಪಿಎಸ್ಐ ಮಹೇಶ್ ಟಿ.ಎಂ, ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್, ಹಿರಿಯಡ್ಕ ಪೊಲೀಸ್ ಠಾಣೆಯ ಪ್ರವೀಣ್ ಶೆಟ್ಟಿಗಾರ್, ಮಲ್ಪೆ ವೃತ್ತ ಕಛೇರಿಯ ಇಂದ್ರೇಶ್ , ಹನುಮಂತ ಅಸ್ಕಿ, ಮನು ಕುಮಾರ್, ರಶ್ಮೀ ಹೆಗಡೆ, ರವಿ ಕುಮಾರ್ ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಹಾಗೂ ದಿನೇಶ್ ಅವರನ್ನೊಳಗೊಂಡ ವಿಶೇಷ ತಂಡ ಭಾಗವಹಿಸಿತ್ತು.