Udupi | ನ.27-29ರವರೆಗೆ ರಾಜ್ಯಮಟ್ಟದ ಆಹಾರ ಮೇಳ
ಸಾಂದರ್ಭಿಕ ಚಿತ್ರ
ಉಡುಪಿ : ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ ವತಿಯಿಂದ ರಾಜ್ಯ ಮಟ್ಟದ ಆಹಾರ ಮೇಳವನ್ನು ನ.27, 28 ಮತ್ತು 29ರಂದು ಹಮ್ಮಿಕೊಳ್ಳಲಾಗಿದೆ.
2016ರಲ್ಲಿ ಸಮಾನಮನಸ್ಕ ಬೇಕರಿ ಮತ್ತು ಇತರ ಖಾದ್ಯ ವಸ್ತು ತಯಾರಕರು ಮತ್ತು ಮಾರಾಟಗಾರರು ಸೇರಿ ಈ ಸಂಘವನ್ನು ಆರಂಭಿಸಿದ್ದು, ಇದೀಗ ಈ ಸಂಸ್ಥೆ ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಕರಾವಳಿ ಭಾಗದಲ್ಲಿಯೇ ಪ್ರಪ್ರಥಮವಾದ ರಾಜ್ಯ ಮಟ್ಟದ ಆಹಾರ ಮೇಳ ಉಡುಪಿ ಆಹಾರ ಬಿಸಿನೆಸ್ ಎಕ್ಸ್ಪೋ - 2026’ ವನ್ನು ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನ.27ರಿಂದ 29ರವರೆಗೆ ಆಯೋಜಿಸಲು ಭರದ ಸಿದ್ಧತೆಗಳನ್ನು ನಡೆಸಲಾಗಿದೆ.
ಈ ಮೇಳದಲ್ಲಿ ಬೇಕರಿ, ಖಾದ್ಯ, ಆಹಾರೋತ್ಪನ್ನಗಳ ಪ್ರಾತ್ಯಕ್ಷಿಕೆ ಜೊತೆಗೆ, ವಿಶೇಷವಾಗಿ ಆಹಾರೋದ್ಯಮಕ್ಕೆ ಬೇಕಾದ ದೇಶವಿದೇಶದ ಯಂತ್ರೋಪಕರಣಗಳ ದೊಡ್ಡಮಟ್ಟದ ಪ್ರದರ್ಶನ - ಮಾರಾಟ ಮಳಿಗೆಗಳಿರುತ್ತದೆ. ಉಡುಪಿ ಜಿಲ್ಲೆಯ ಪಾರಂಪರಿಕ ಆಹಾರೋತ್ಪನ್ನಗಳನ್ನು ಹೊರಜಿಲ್ಲೆಗಳಿಗೆ ಪರಿಚಯಿಸುವುದು, ಜಿಲ್ಲೆಯ ಆಹಾರೋದ್ಯಮಿಗಳಿಗೆ ಪ್ರೋತ್ಸಾಹ, ಯುವ ಜನತೆಯನ್ನು ಈ ಉದ್ಯಮಕ್ಕೆ ಆಕರ್ಷಿಸುವುದು, ಸಾಧಕರನ್ನು ಗೌರವಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ತಿಳಿಸಿದ್ದಾರೆ.