ಉಡುಪಿ ಜಿಲ್ಲಾ ಮಟ್ಟದ 'ಕಡಲ ತೀರ ವಲಯ ನಿರ್ವಹಣಾ ಸಮಿತಿ' ಸದಸ್ಯರಾಗಿ ಕೆಪಿಸಿಸಿ ಸಂಘಟಕ ಎ.ಕೆ.ಅನ್ಸಾಫ್ ನೇಮಕ
ಎ.ಕೆ.ಅನ್ಸಾಫ್
ಮಂಗಳೂರು: ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಯಾದ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಕಡಲ ತೀರ ವಲಯ ನಿರ್ವಹಣಾ ಸಮಿತಿಯನ್ನು ಪುನರ್ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ 13 ಮಂದಿಯ ನೇತೃತ್ವದ ಸಮಿತಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಮೂಲದ ಎ.ಕೆ.ಅನ್ಸಾಫ್ ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಸಮಿತಿಗೆ ಉಡುಪಿ ಜಿಲ್ಲಾಧಿಕಾರಿ ಅವರು ಅಧ್ಯಕ್ಷರಾಗಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಉಡುಪಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಉಡುಪಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನ ಅಧಿಕಾರಿ, ನಗರ ಸಭಾ ಆಯುಕ್ತರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಉಡುಪಿಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣದ ಪರಿಸರ ಅಧಿಕಾರಿ, ಜಿಲ್ಲಾ ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕರು ಸೇರಿದಂತೆ ಒಟ್ಟು 13 ಮಂದಿ ಸದಸ್ಯರಿದ್ದು, ಅದರಲ್ಲಿ 9 ಮಂದಿ ಸರಕಾರಿ ಅಧಿಕಾರಿಗಳು ಹಾಗು 3 ಮಂದಿ ಅಧಿಕಾರೇತರ ಸದಸ್ಯರು ಸೇರಿದ್ದಾರೆ.
ಈ ಸಮಿತಿಯೂ ಉಡುಪಿ ಜಿಲ್ಲೆ ಸಿ ಆರ್ ಝಡ್ ವ್ಯಾಪ್ತಿಯ ಸಂರಕ್ಷಣೆಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸಲಿದೆ.