ಉಡುಪಿ | ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸಂಶೋಧನೆಗೆ ಅವಕಾಶವಿದೆ : ಡಾ.ಗುರುಬಸವರಾಜ
ಉದ್ಯಾವರ ಎಸ್ಡಿಎಂ ಕಾಲೇಜಿನಲ್ಲಿ ಶಿಷ್ಯೋಪನಯನ ಸಂಸ್ಕಾರ
ಉಡುಪಿ, ಡಿ.11: ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಹಳಷ್ಟು ಸಂಶೋಧನೆಗಳಿಗೆ ಇನ್ನೂ ಅವಕಾಶಗಳಿವೆ. ಪ್ರಸ್ತುತ ಸಮಾಜದಲ್ಲಿ ಆಯುರ್ವೇದ ಸೇವೆಯ ಕುರಿತಂತೆ ಸಾಕಷ್ಟು ನಿರೀಕ್ಷೆಗಳಿವೆ. ಹೀಗಾಗಿ ನುರಿತ ಆಯುರ್ವೇದ ವೈದ್ಯರಾಗುವಂತೆ ಮೈಸೂರಿನ ಜೆಎಸ್ಎಸ್ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಗುರು ಬಸವರಾಜ ಹೇಳಿದ್ದಾರೆ.
ಇಂದು ನಡೆದ ಉದ್ಯಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 28ನೇ ಶಿಷ್ಯೋಪನಯನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವೈದ್ಯ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಶಿಷ್ಯೋಪಯನ ಸಂಸ್ಕಾರದ ಪ್ರಾಮುಖ್ಯತೆಯ ಕುರಿತಂತೆ ಮಾತನಾಡಿದ ಅವರು ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಸಾಮಾಜಿಕ ಕ್ಷೇತ್ರದ ಕೊಡುಗೆಗಳ ಕುರಿತು ವಿಶೇಷವಾಗಿ ಶ್ಲಾಷಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಮುಖೇನ ವಿದ್ಯೆ ಕಲಿಯುವ ವಿಧಾನವನ್ನು ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಿದ್ದು, ಇಂದಿನ ದಿನಗಳಲ್ಲೂ ಆಯುರ್ವೇದ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಪರಿಣತ ವೈದ್ಯ ಶಿಕ್ಷಕರ ಮಾರ್ಗದರ್ಶನ ಅಮೂಲ್ಯವಾಗಿದೆ ಎಂದರು.
ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಅತಿಥಿಗಳನ್ನು ಸ್ವಾಗತಿಸಿ, ಶಿಷ್ಯೋಪನಯನ ಸಂಸ್ಕಾರದ ಸದುದ್ದೇಶವನ್ನು ವಿವರಿಸಿದರು. ಆಡಳಿತ ವಿಭಾಗ ಮುಖ್ಯಸ್ಥ ಡಾ.ಪ್ರಶಾಂತ್ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆಯನ್ನು ನೆರವೇರಿಸಿದರು.
ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಮತ್ತು ಕಾರ್ಯಕ್ರಮ ಸಂಯೋಜಕ ಡಾ.ರಜನೀಶ್ಗಿರಿ ಉಪಸ್ಥಿತರಿದ್ದರು. ಪ್ರಾತಃಕಾಲದ ಸಮಯದಲ್ಲಿ ನಡೆದ ಧನ್ವಂತರಿ ಹೋಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.
ಸ್ನಾತಕ ವಿಭಾಗದ ಮುಖ್ಯಸ್ಥರಾದ ಡೀನ್ ಡಾ.ಪ್ರಥ್ವಿರಾಜ್ ಪುರಾಣಿಕ್ ವಂದಿಸಿದರು. ಕೌಮರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಾವ್ಯ ಹಾಗೂ ಆಗಧ ತಂತ್ರ ವಿಭಾಗದ ಡಾ.ಶುಭಾ ಪಿ ಯು. ಕಾರ್ಯಕ್ರಮ ನಿರೂಪಿಸಿದರು.