×
Ad

33 ಲಕ್ಷ ರೂ. ವೆಚ್ಚದಲ್ಲಿ ಎರಡು ಜಂಕ್ಷನ್‌ಗಲ್ಲಿ ಸಿಗ್ನಲ್ ಅಳವಡಿಕೆ: ಉಡುಪಿ ಎಸ್ಪಿ

ಮಣಿಪಾಲ ಸಿಂಡಿಕೇಟ್ ಸರ್ಕಲ್ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಪರಿಶೀಲನೆ

Update: 2025-12-03 00:01 IST

ಮಣಿಪಾಲ: ಉಡುಪಿ ನಗರದ ಕಲ್ಸಂಕ ಜಂಕ್ಷನ್ ಹಾಗೂ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ನಗರಸಭೆಯ 33 ಲಕ್ಷ ರೂ. ಅನುದಾನದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚುವರಿಯಾಗಿ 12 ಲಕ್ಷ ರೂ. ಒದಗಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಲ್ಲಿ ಅಳವಡಿಸಲಾದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವ ರೊಂದಿಗೆ ಮಾತನಾಡುತ್ತಿದ್ದರು.

ಒಂಭತ್ತು ತಿಂಗಳ ಹಿಂದೆ ಈ ಹಿಂದಿನ ಎಸ್ಪಿ ಡಾ.ಅರುಣ್ ಕುಮಾರ್ ನಗರದ ಕೆಲವು ಕಡೆ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಬಗ್ಗೆ ನಗರಸಭೆಗೆ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ ಇದೀಗ ನಗರಸಭೆಯವರು ಸದ್ಯಕ್ಕೆ ಎರಡು ಕಡೆ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಹಣ ಮಂಜೂರು ಮಾಡಿದ್ದಾರೆ. ಅದರಂತೆ ನಗರದ ಕಲ್ಸಂಕ ಜಂಕ್ಷನ್ ಹಾಗೂ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ ಎಂದರು.

ಸಿಂಡಿಕೇಟ್ ಸರ್ಕಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆಯ ಪ್ರಮುಖ ಸಮಯ ಹಾಗೂ ವಾರಾಂತ್ಯದಲ್ಲಿ ತುಂಬಾ ವಾಹನ ಸಂಚಾರ ದಟ್ಟಣೆ ಇರುವುದ ರಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಅಲ್ಲದೆ ಇದರಿಂದ ಮಣಿಪಾಲ ಆಸ್ಪತ್ರೆಗೆ ಹೋಗುವ ಅಂಬ್ಯುಲೆನ್ಸ್‌ಗಳಿಗೆ ಸಮಸ್ಯೆ ಆಗುತ್ತಿದೆ. ಇದನ್ನೆಲ್ಲ ಮನಗಂಡು ಸಿಂಡಿಕೇಟ್ ಸರ್ಕಲ್‌ಗೂ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಸಿಗಲ್ ಲೈಟ್‌ಗಳನ್ನು 50-40 ಸೆಕೆಂಡ್‌ಗಳಿಗೆ ಸೆಟ್ ಮಾಡಿಕೊಳ್ಳಲಾಗಿದೆ. ಪ್ರಮುಖ ಸಮಯದಲ್ಲಿ 10 ಸೆಕೆಂಡ್ ಹೆಚ್ಚು ಮಾಡಬೇಕಾಗುತ್ತದೆ. ಅದಕ್ಕೆ ತಕ್ಕಂತೆ ನಾವು ಸಿಗ್ನಲ್ ಸಮಯವನ್ನು ಬದಲಾವಣೆ ಮಾಡುತ್ತೇವೆ. ಅದೇ ರೀತಿ ಸಿಂಡಿಕೇಟ್ ಸರ್ಕಲ್‌ನಲ್ಲಿ ಫ್ರೀ ಲೆಫ್ಟ್‌ಗೆ ಅಡ್ಡಿ ಪಡಿಸುತ್ತಿರುವ ಜಾಹೀರಾತು ಹೋಲ್ಡಿಂಗ್‌ನ್ನು ಬೇರೆ ಕಡೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಒಟ್ಟಾರೆ ಇನ್ನು ಮುಂದೆ ನಗರದಲ್ಲಿನ ವಾಹನ ಸಂಚಾರ ವ್ಯವಸ್ಥಿತವಾಗಿ ನಡೆಯಲಿದೆ. ಕಡಿಮೆ ಸಂಖ್ಯೆಯ ಸಿಬ್ಬಂದಿಗಳಿಂದಲೇ ವಾಹನ ಸಂಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ನಿಲುಗಡೆ ಮತ್ತು ಝಿಬ್ರಾ ಕ್ರಾಸಿಂಗ್ ಲೈನ್ ಇನ್ನು ಹಾಕಬೇಕಾಗಿದೆ. ಈ ಕಾರ್ಯವನ್ನು ನಗರಸಭೆ ಕೂಡಲೇ ಮಾಡಲಿದೆ ಎಂದು ಅವರು ಹೇಳಿದರು.

ಫ್ರಿ ಲೆಫ್ಟ್ ಎಲ್ಲ ಕಡೆ ಕೊಡಲು ನಾವು ಪ್ರಯತ್ನ ಮಾಡುತ್ತೇವೆ. ಸಿಂಡಿಕೇಟ್ ಸರ್ಕಲ್‌ನಲ್ಲಿ ಬೃಹತ್ ವಾಹನಗಳಿಗೆ ಫ್ರಿ ಲೆಫ್ಟ್ ಆಗಲು ತುಂಬಾ ಕಷ್ಟ ಇದೆ. ಈ ಬಗ್ಗೆ ಪರಿಶೀಲಿಸಿ, ಇಲ್ಲಿರುವ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸ ಲಾಗುವುದು. ಕೆಲವು ಕಡೆ ಫ್ರಿ ಲೆಫ್ಟ್ ಇದ್ದರೂ ವಾಹನಗಳನ್ನು ಚಲಾಯಿಸದೆ ಟ್ರಾಫಿಕ್‌ನಲ್ಲಿಯೇ ನಿಲ್ಲಿಸುತ್ತಾರೆ. ಅವರಿಗೆ ಆ ಕುರಿತು ಜಾಗೃತಿ ಮೂಡಿಸ ಬೇಕಾಗಿದೆ. ಆರಂಭದಲ್ಲಿ ಜಾಗೃತಿ ಮೂಡಿಸಿ, ಬಳಿಕ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವ ಕಾರ್ಯ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.

‘ಸಾಧಕ ಬಾಧಕಗಳ ಬಗ್ಗೆ ಅಧ್ಯಯನ’

ಕಲ್ಸಂಕ ಜಂಕ್ಷನ್‌ನಂತೆ ಸಿಂಡಿಕೇಟ್ ಸರ್ಕಲ್‌ನಲ್ಲಿನ ಟ್ರಾಫಿಕ್ ಸಿಗ್ನಲ್‌ನ ಸಾಧಕ ಬಾಧಕಗಳ ಬಗ್ಗೆಯೂ ಅಧ್ಯಯನ ಮಾಡಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಸಿಂಡಿಕೇಟ್ ಸರ್ಕಲ್‌ನಲ್ಲಿ ಉಡುಪಿಯಿಂದ ಜಿಲ್ಲಾಧಿಕಾರಿ ಕಚೇರಿ ಹೋಗುವ ವಾಹನಗಳು ಎಡಕ್ಕೆ ತಿರುಗಿಸಲು ಅನುಕೂಲವಾಗುವಂತೆ ಫ್ರೀ ಲೆಫ್ಟ್ ಮಾಡಲು ರಸ್ತೆಯನ್ನು ಇನ್ನಷ್ಟು ಅಗಲ ಮಾಡಬೇಕಾಗಿದೆ. ಅದೇ ರೀತಿ ಈ ಸರ್ಕಲ್ ಎತ್ತರದಲ್ಲಿ ಇರುವುದರಿಂದ ಉಡುಪಿಯಿಂದ ಮಣಿಪಾಲಕ್ಕೆ ಬರುವ ಬೃಹತ್ ಗಾತ್ರ ವಾಹನಗಳು ಏರಿಯಲ್ಲಿ ನಿಂತರೆ ಉರುಳು ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಅದಕ್ಕೆ ಸರಿಯಾಗಿ ಸಿಗ್ನಲ್ ಸಮಯವನ್ನು ಹೋಂದಾಣಿಕೆ ಮಾಡಲಾಗುವುದು ಎಂದರು.

‘ಪೊಲೀಸ್ ಇಲಾಖೆಯ ಪ್ರಸ್ತಾಪದಂತೆ ಟ್ರಾಫಿಕ್ ಸಿಗ್ನಲ್‌ಗೆ ಅನುದಾನ ಒದಗಿಸಿ ಅಳವಡಿಸಲಾಗಿದೆ. ಇದಕ್ಕೆ ಇಲ್ಲಿಯ ಜನರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗತ್ತದೆ. ಆದುದರಿಂದ ಆರಂಭದಲ್ಲಿ ಸವಾರರು ಹಾಗೂ ಚಾಲಕರಿಗೆ ಜಾಗೃತಿ ಮೂಡಿಸಬೇಕಾಹಿದೆ. ಈ ಕಾರ್ಯವನ್ನು ನಾವು ಪೊಲೀಸ್ ಇಲಾಖೆ ಜೊತೆ ಸೇರಿಕೊಂಡು ಮಾಡುತ್ತೇವೆ’

-ಮಹಾಂತೇಶ್ ಹಂಗರಗಿ, ಪೌರಾಯುಕ್ತರು, ನಗರಸಭೆ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News