ದಕ್ಷಿಣ ಆಫ್ರಿಕಾದಲ್ಲಿ ಯುವ ಗಾಂಧಿ ಪ್ರಭುದ್ಧರಾದರು : ಓ.ಆರ್.ಪ್ರಕಾಶ್
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಉಡುಪಿ : ನಾವೆಲ್ಲರೂ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಗಾಂಧೀಜಿಯ ಬಗ್ಗೆ ಮಾತನಾಡುತ್ತೇವೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಅವರು ಮಾಡಿದ ಮಹಾನ್ ಕೆಲಸಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಯುವ ಗಾಂಧಿ ಪ್ರಭುದ್ಧರಾದರು. ಯುವಕ ಗಾಂಧೀಜಿಯ ಕೆಲಸಗಳು, ನಡೆ, ನುಡಿಗಳು ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ರೀಡರ್ ಓ.ಆರ್.ಪ್ರಕಾಶ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಕೀಲಿಕೆ ಹೇಗಿರಬೇಕು, ಪತ್ರಿಕೆ - ಪತ್ರಿಕೋದ್ಯಮ ಹೇಗಿರಬೇಕು, ಸಮಾಜ ಸೇವೆ ಹೇಗಿರಬೇಕು, ಸಂಘಟನೆ ಹೇಗಿರಬೇಕು, ಚಳುವಳಿಗಳು ಹೇಗಿರಬೇಕು, ಮಾನವೀಯತೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟರು. ಸತ್ಯಾಗ್ರಹ ಎಂಬ ಹೊಸ ವಿಧಾನವನ್ನು ಹುಟ್ಟುಹಾಕಿದರು ಹಾಗೂ ಗಾಂಧೀಜಿಯ ತತ್ತ್ವಾದರ್ಶಗಳು ಸಾರ್ವಕಾಲಿಕವಾಗಿ ನಿಲ್ಲುವಂತಹವು ಎಂದು ಅವರು ತಿಳಿಸಿದರು.
ಗಾಂಧೀಜಿ 23 ವರ್ಷ ವಯಸ್ಸಿನ ಯುವ ವಕೀಲರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿ ಅಲ್ಲಿ ತಮ್ಮ ವಕೀಲಿಕೆಯ ಮೂಲಕ ಕಕ್ಷಿದಾರರಿಗೆ ಹೊರೆಯಾಗದಂತೆ ಸಾಧ್ಯವಿರುವ ಪ್ರಕರಣಗಳನ್ನು ನೈತಿಕ ತಳಹದಿಯಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿದರು. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಮೂಲದವರ ಧ್ವನಿಯಾಗಿ ಅವರನ್ನು ಸಂಘಟಿಸಿದರು. ಅವರು ಪತ್ರಕರ್ತರಾಗಿ ಇಂಡಿಯನ್ ಒಪೀನಿಯನ್ ಪತ್ರಿಕೆಯಲ್ಲಿ ನಾಲ್ಕು ಭಾಷೆಗಳನ್ನು ಉಪಯೋಗಿಸಿ ಹೊರತಂದರು. ಇದು ಅದ್ಭುತ ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಹಾಗೂ ಆದರ್ಶಗಳ ಬಗ್ಗೆ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಶ್ವನಾಥ ಪೈ ಎಂ. ಮಾತನಾಡಿ, ಇಂದಿನ ಕಾಲದಲ್ಲಿ ರಾಜಕೀಯವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಶಾಸ್ತ್ರೀಜಿಯವರು ದಾರಿದೀಪವಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಗಾಯತ್ರಿ ಜಿ. ಪೈ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಮಾತನಾಡಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ.ವಸುಮತಿ ಭಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಗಾಂಧೀಜಿಗೆ ಪ್ರಿಯವಾದ ಭಜನೆಗಳ ಗಾಯನ ನಡೆಯಿತು.