ಉಡುಪಿ | ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷನ ದೇಶದ್ರೋಹದ ಪ್ರಕರಣ ಸಮಗ್ರ ತನಿಖೆಯಾಗಲಿ: ರಮೇಶ್ ಕಾಂಚನ್
ಉಡುಪಿ, ಡಿ.22: ರಾಜ್ಯದ ಯಾವುದೇ ಮೂಲೆಯಲ್ಲಿ ಅಕ್ರಮ ವಿದೇಶಿ ನುಸುಳುಕೋರರ ಬಂಧನವಾದರೆ ಕಾಂಗ್ರೆಸ್ ವಿರುದ್ದ ಆರೋಪ ಮಾಡುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ತಮ್ಮದೇ ಪಕ್ಷದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಿರ್ವಹಿಸುವ ಹೋಟೆಲಿನಲ್ಲಿ ಅಕ್ರಮವಾಗಿ ದೇಶದೊಳಗೆ ಬಂದಿರುವ ವಿದೇಶಿಯರನ್ನು ಕೆಲಸಕ್ಕಿಟ್ಟಿರುವ ಕುರಿತು ಮೌನ ವಹಿಸಿರುವುದು ಯಾಕೆ? ದೇಶದ ಭದ್ರತೆಗೆ ಅಪಾಯ ತಂದೊಡ್ಡಬಲ್ಲ ಈ ಗಂಭೀರ ದೇಶದ್ರೋಹ ಪ್ರಕರಣವನ್ನು ಶಾಸಕರು ಸಮರ್ಥಿಸಿಕೊಳ್ಳುವರೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಕ್ರಮ ನುಸುಳುಕೋರರ ಪರ, ಎಂದು ಹೋದಲೆಲ್ಲಾ ಭಾಷಣ ಬಿಗಿಯುವ, ತಾವೇ ದೊಡ್ಡ ದೇಶ ಭಕ್ತರು ಎಂದು ಪೋಸು ಕೊಡುವ ಶಾಸಕರು ಹಾಗೂ ಬಿಜೆಪಿ ನಾಯಕರಿಗೆ ಉಡುಪಿ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಡೆಸುತ್ತಿರುವ ರೆಸಾರ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದ ವಿದೇಶಿಗರನ್ನು ಅಕ್ರಮವಾಗಿ ಕೆಲಸಕ್ಕೆ ಇಟ್ಟುಕೊಂಡು ದೇಶದ ಭದ್ರತೆಗೆ ಆತಂಕ ಒಡ್ಡಿರುವಾಗ ದೇಶದ ಭದ್ರತೆಯನ್ನು ಗುತ್ತಿಗೆ ಪಡೆದುಕೊಂಡಿರುವ ಬಿಜೆಪಿಗರಿಗೆ ಆತನ ದೇಶದ್ರೋಹದ ಕೃತ್ಯವನ್ನು ಖಂಡಿಸದಿರುವುದು ವಿಪರ್ಯಾಸ.
ಬಿಜೆಪಿಗರು ಹೇಳುವುದು ವೇದಾಂತ ಮಾಡುವುದು ಎಲ್ಲಾ ಅನಾಚಾರ ಎಂಬುದು ಈ ಪ್ರಕರಣ ಮೂಲಕ ಸಾಬೀತಾಗಿದೆ. ಈ ಹಿಂದೆ ಕೂಡ ಬ್ರಹ್ಮಾವರದಲ್ಲಿ ಬಿಜೆಪಿ ಯುವ ಮುಖಂಡ ಮನೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಮಾಡಿದ್ದು, ಕೂಡ ಬೆಳಕಿಗೆ ಬಂದಿತ್ತು. ಬಿಜೆಪಿಗರು ಒಟ್ಟಾರೆಯಾಗಿ ಅಕ್ರಮ ಚಟುವಟಿಕೆಗಳಿಗೆ ನೇರವಾಗಿ ಬೆಂಬಲಿಸುವುದಲ್ಲದೆ ಬಳಿಕ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಬಿಜೆಪಿಗರು ದೇವರು ಎಂದು ಭಾವಿಸಿರುವ ಉತ್ತರ ಪ್ರದೇಶದ ಯೋಗಿ ಅದಿತ್ಯನಾಥ್ ಅವರು ಆಡಳಿತ ನಡೆಸುವ ರಾಜ್ಯದಿಂದ ಬಂದು ಮಲ್ಪೆಯ ಕೊಚ್ಚಿನ ಶಿಪ್ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕೆಗಳ ಕುರಿತು ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿ ಬಂಧನಕ್ಕೆ ಒಳಗಾಗಿದ್ದರು. ಅನ್ಯಾಯವೇ ನಡೆಯಲು ಬಿಡುವುದಿಲ್ಲ ಎನ್ನುವ ಯೋಗಿ ಅವರ ರಾಜ್ಯದ ಜನರು ಕರ್ನಾಟಕದಲ್ಲಿ ಬಂದು ಅಕ್ರಮ ಚಟುವಟಿಕೆ ಮಾಡಿದಾಗಲೂ ಕೂಡ ಬಿಜೆಪಿಗರು ಮೌನವಾಗಿದ್ದರು ಎನ್ನುವುದು ಒಂದು ರೀತಿಯಲ್ಲಿ ಇವರ ದೇಶಪ್ರೇಮದ ಬಗ್ಗೆ ಸಂಶಯ ಮೂಡುತ್ತದೆ.
ಈ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷನ ರೆಸಾರ್ಟ್ ನಲ್ಲಿ ಬಂಧಿಸಿರುವ ಅಕ್ರಮ ನುಸುಳುಕೋರರಾದ ವಿದೇಶಿಗರ ಹಾಗೂ ಅವರಿಗೆ ಆಶ್ರಯ ಕೊಟ್ಟು ಉದ್ಯೋಗ ನೀಡಿರುವ ಗಂಭೀರ ದೇಶ ದ್ರೋಹದ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.