ಉಡುಪಿ | ವಿಕಸಿತ ಭಾರತ ನಿರ್ಮಾಣದಿಂದ ಅಂಬೇಡ್ಕರ್‌ಗೆ ನೈಜ ಗೌರವ: ಕಾರ್ಣಿಕ್
ಉಡುಪಿ, ಡಿ.7: ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಪಡಿಸಿದ್ದಾರೆ. 2047ಕ್ಕೆ ವಿಕಸಿತ ಭಾರತ ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ನೈಜ ಗೌರವ ಸಲ್ಲಿಸುವ ಅಗತ್ಯವಿದೆ ಎಂದು ರಾಜ್ಯ ಬಿಜೆಪಿ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಜಿಲ್ಲಾ ಎಸ್.ಸಿ. ಮೋರ್ಚಾ, ಜಿಲ್ಲಾ ಎಸ್.ಟಿ. ಮೋರ್ಚಾ ಮತ್ತು ಜಿಲ್ಲಾ ಒಬಿಸಿ ಮೋರ್ಚಾ ನೇತತ್ವದಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 42 ಸಾವಿರ ಕೋಟಿ ರೂ. ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಬಗ್ಗೆ ಮೋರ್ಚಾಗಳು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಜನರಿಗೆ ನೈಜ ವಿಚಾರಗಳನ್ನು ತಿಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ವಹಿಸಿದ್ದರು. ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾಧ್ಯಕ್ಷ ಕುಮಾರ್ದಾಸ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಉಪಸ್ಥಿತರಿದ್ದರು.