ಉಡುಪಿ | ರಾಜ್ಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ
ಅನಾಥ ಹೆಣ್ಣುಮಕ್ಕಳಿಗೆ ಧಾರೆ ಎರೆದುಕೊಟ್ಟ ಉಡುಪಿ ಡಿಸಿ!
ಉಡುಪಿ, ಡಿ.12: ಉಡುಪಿ ನಿಟ್ಟೂರಿನಲ್ಲಿರುವ ರಾಜ್ಯ ಸರಕಾರದ ಮಹಿಳಾ ನಿಲಯದಲ್ಲಿ ವಿವಾಹ ಸಂಭ್ರಮ ಮನೆ ಮಾಡಿತ್ತು. ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥ ಹೆಣ್ಣು ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರಿಗೆ ಉಡುಪಿ ಜಿಲ್ಲಾಧಿಕಾರಿ ಮುಂದೆ ನಿಂತು ಧಾರೆ ಎರೆದುಕೊಟ್ಟರು.
ಶುಕ್ರವಾರ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮಲ್ಲೇಶ್ವರಿ ಅವರನ್ನು ಸಂಜಯ ಪ್ರಭು ಮತ್ತು ಸುಶೀಲಾ ಅವರನ್ನು ನಾಗರಾಜ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಈವರೆಗೆ ಇಲ್ಲಿನ 25 ಹೆಣ್ಣು ಮಕ್ಕಳ ವಿವಾಹ ಕಾರ್ಯ ನಡೆದಿದ್ದು, ಇದು 26 ಮತ್ತು 27ನೇ ಮದುವೆ ಕಾರ್ಯಕ್ರಮವಾಗಿದೆ.
ಮಂಗಳವಾದ್ಯ, ಪುರೋಹಿತರಿಂದ ಮಂತ್ರೋಚ್ಛಾರದ ನಡುವೆ ವರ, ವಧು ಪರಸ್ಪರ ಹಾರ ಬದಲಾಯಿಸಿ ವೈವಾಹಿಕ ಬದುಕು ಪ್ರದೇಶಿಸಿದರು. ವಧುಗಳನ್ನು ಖುದ್ದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಧಾರೆ ಎರೆದು ಕೊಟ್ಟರು. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಸಾಕ್ಷಿಯಾದರು.
ಮದುವೆಗಾಗಿ ಮಹಿಳಾ ನಿಲಯವನ್ನು ಹೂವಿನ ತಳಿರು ತೋರಣದಿಂದ ಶೃಂಗಾರಿಸಲಾಗಿತ್ತು. 300 ಜನರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ವಧುವಿಗೆ ರೇಶ್ಮೆ ಸೀರೆ, ಶೃಂಗಾರ ಸಾಧನ ಸೇರಿದಂತೆ ಎಲ್ಲವೂ ದಾನಿಗಳ ನೆರವಿನಿಂದ ಮಾಡಲಾಗಿತ್ತು.
ವಿವಾಹ ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಧು ಪತ್ರಿಕೋದ್ಯಮ ವಿದ್ಯಾರ್ಥಿನಿ!
ಮೂಲತಃ ಬಳ್ಳಾರಿ ಜಿಲ್ಲೆಯ ಮಲ್ಲೇಶ್ವರಿ, ಕಾರವಾರದ ಬಾಲಕಿಯರ ಬಾಲಮಂದಿರದಿಂದ ಉಡುಪಿಯ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರ ಶುಕ್ರವಾರಗೊಂಡು, 18ವರ್ಷ ಪೂರ್ಣಗೊಂಡ ನಂತರ ರಾಜ್ಯ ಮಹಿಳಾ ನಿಲಯದಲ್ಲಿ ವಾಸ ಮಾಡಿಕೊಂಡಿದ್ದಾರೆ. ಇದೀಗ 22 ವರ್ಷದ ಮಲ್ಲೇಶ್ವರಿ ಉಡುಪಿ ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾರೆ.
ಇವರನ್ನು ವಿವಾಹವಾಗಿರುವ ಮುಲ್ಕಿಯ ಎಂ.ಸಂಜಯ್ ಪ್ರಭು(31) ಬೆಂಗಳೂರಿನ ಐಬಿಎಂ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಈ ಜೋಡಿ ಇಂದು ಪರಸ್ಪರ ಹಾರ ಬದಲಾಯಿಸಿದ್ದು, ಮುಂದೆ ಹಾಲ್ನಲ್ಲಿ ಅವರ ಜಾತಿಯ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ನಡೆಸಲಿದ್ದಾರೆ.
ಸುಶೀಲಾ ಮೂಗಿ ಹಾಗೂ ಕಿವುಡಿಯಾಗಿದ್ದು, ತನ್ನ ವಿಳಾಸ ಬಗ್ಗೆ ಮಾಹಿತಿ ನೀಡಲೂ ಅಸಮರ್ಥರಾಗಿದ್ದಾರೆ. 42ವರ್ಷ ಪ್ರಾಯದ ಅವರು, ಕಳೆದ ಹಲವು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಾಗಿದ್ದಾರೆ. ಇವರನ್ನು ವಿವಾಹವಾಗಿರುವ ಹಾಸನ ಜಿಲ್ಲೆಯ ನಾಗರಾಜ(45) ಬೆಂಗಳೂರಿನಲ್ಲಿ ಕ್ಯಾಂಟಿನ್ ವ್ಯವಹಾರ ಮಾಡಿಕೊಂಡಿದ್ದಾರೆ.
‘ವರನ ಪೂರ್ವಾಪರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿವಾಹ ಮಾಡಿಕೊಡಲಾಗಿದೆ. ಪುರೋಹಿತರನ್ನು ಕರೆಸಿ ಹಿಂದೂ ಸಂಪ್ರದಾಯದಂತೆ ಮದುವೆಯನ್ನು ನಡೆಸಿಕೊಡಲಾಗಿದೆ. ಮದುವೆಯ ನಂತರ ವಿವಾಹವನ್ನು ನೋಂದಣಿ ಮಾಡಲಾಗುವುದು. ನಿಲಯದ ನಿವಾಸಿನಿಯರಿಗೆ ವಿವಾಹ ಪ್ರೋತ್ಸಾಹಧನವಾಗಿ 50,000 ರೂ.ಗಳನ್ನು ಅವರುಗಳ ಹೆಸರಿನಲ್ಲಿ ಠೇವಣಿ ಇಟ್ಟು, ನಿರಂತರ ಮೂರು ವರ್ಷಗಳ ಕಾಲ ಇಲಾಖೆಯು ವಧು-ವರರ ಮುಂದಿನ ಜೀವನದ ಮೇಲೆ ನಿಗಾ ವಹಿಸಲಿದೆ. ನಂತರದಲ್ಲಿ ಸಂಸ್ಥೆಯ ನಿವಾಸಿನಿಯರ ಖಾತೆಗೆ ಹಣ ವರ್ಗಾಯಿಸಲಾಗುವುದು’
-ಸ್ವರೂಪ, ಟಿ.ಕೆ., ಜಿಲ್ಲಾಧಿಕಾರಿ ಉಡುಪಿ
‘ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ 25 ಮದುವೆಯನ್ನು ಮುಗಿಸಿದ್ದೇವೆ. ಇಂದು 26 ಮತ್ತು 27ನೆ ಮದುವೆಯನ್ನು ಅದ್ದೂರಿಯಿಂದ ಮಾಡಿದ್ದೇವೆ. ಇವರಿಬ್ಬರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ನಿಲಯದಲ್ಲಿ ಮದುವೆಗಳು ಹೆಚ್ಚಾದಂತೆ ವಧುವನ್ನು ಅರಸಿ ಕರೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ’
-ಪುಷ್ಪಾರಾಣಿ, ಅಧೀಕ್ಷಕರು, ರಾಜ್ಯ ಮಹಿಳಾ ನಿಲಯ, ಉಡುಪಿ