ಎಸ್‌ಐಆರ್ ಯಶಸ್ಸಿಗೆ ವಿದ್ಯಾರ್ಥಿ – ಯುವಜನರು ಸೇತುವೆಯಾಗಲಿ: ಸುನೀಲ್ ಎಂ.
ಭಟ್ಕಳ: ದೇಶದ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳು ಮತ್ತು ಯುವಜನರು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಸಂದರ್ಭದಲ್ಲಿ ಮತದಾರರು ಹಾಗೂ ತಾಲ್ಲೂಕು ಆಡಳಿತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ತಮ್ಮ ಪರಿಣಾಮಕಾರಿ ಪಾತ್ರ ವಹಿಸಬೇಕು ಎಂದು ಭಟ್ಕಳ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ (SVEEP) ಸಮಿತಿಯ ಅಧ್ಯಕ್ಷ ಸುನೀಲ್ ಎಂ. ಹೇಳಿದರು.
ಸೋಮವಾರ ವಿದ್ಯಾರ್ಥಿ–ಯುವಜನರ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿ, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ವಿದ್ಯಾರ್ಥಿಗಳು ಮತ್ತು ಯುವಜನರು ಸಾರ್ವಜನಿಕರಿಗೆ ಎಸ್‌ಐಆರ್ ಕುರಿತು ಅರಿವು ಮೂಡಿಸಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸಂಬಂಧಿತ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಲು ನೆರವು ನೀಡಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ಅಭಿಯಾನದ ಗುರಿ ಸಾಧಿಸಲು ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಭಟ್ಕಳ ಉಪವಿಭಾಗಾಧಿಕಾರಿ ಮಹೇಶ್ ಅವರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿದರು. ಬಳಿಕ ರ‍್ಯಾಲಿಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಅಂಜುಮನ್ ಪದವಿ ಕಾಲೇಜು, ಶ್ರೀ ಗುರು ಸುಧೀಂದ್ರ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು, ತಾಲ್ಲೂಕಿನ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಪಂಚಾಯಿತಿ ಆವರಣದಿಂದ ಆರಂಭವಾದ ರ‍್ಯಾಲಿಯು ಶಮ್ಸುದ್ದೀನ್ ವೃತ್ತದ ಮೂಲಕ ಸಾಗಿಬಂದು ಅಂಜುಮನ್ ಪ್ರೌಢಶಾಲೆಯ ಮೈದಾನದಲ್ಲಿ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಶೋಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಸುಶೀಲಾ ಮುಗೇರ, ಸಮಾಜ ಕಲ್ಯಾಣ ಇಲಾಖೆಯ ಸಹಾ ಯಕ ನಿರ್ದೇಶಕಿ ಗೀತಾ ಹೆಗಡೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜು ನಾಯ್ಕ, ನಗರಸಭೆ ವ್ಯವಸ್ಥಾಪಕ ವಿ.ಟಿ. ನಾಯ್ಕ, ಪಟ್ಟಣ ಪಂಚಾಯಿತಿಯ ನಾರಾಯಣ ನಾಯ್ಕ, ಕಾಲೇಜುಗಳ ಪ್ರಾಂಶುಪಾಲರಾದ ವೀರೇಂದ್ರ ಶ್ಯಾನಭಾಗ್ ಹಾಗೂ ವಿಶ್ವನಾಥ ಪಾಲೇಕರ್, ತಾಲ್ಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ರಾಜೇಶ್ ಮಹಾಲೆ, ಯೋಜನಾಧಿಕಾರಿ ಹಾಗೂ ತಾಲ್ಲೂಕು ಸ್ವೀಪ್ ನೋಡಲ್ ಅಧಿಕಾರಿ ಹೇಮಾ ನಾಯ್ಕ, ಉದಯ ಬೋರ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿಯ ವ್ಯವಸ್ಥಾಪಕ ಕರಿಅಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು.