ಭಟ್ಕಳ: ಮರ್ಕಝಿ ಮೀಲಾದ್ ಕಮಿಟಿಯಿಂದ ಬೃಹತ್ ಮೆರವಣಿಗೆ
ಭಟ್ಕಳ: ಭಟ್ಕಳ ಮರ್ಕಝಿ ಮೀಲಾದ್ ಕಮಿಟಿ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಮೀಲಾದ್ ಮೆರವಣಿಗೆ ನಡೆಯಿತು.
ಈದ್ ಮಿಲಾದುನ್ನಬಿ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಫೈಝೆ ರಸೂಲ್, ಬಝ್ಮೆ ಫೈಝೆ ರಸೂಲ್, ತಾಜುಶ್ಶುನ್ನತ್, ಎಸ್‌ಎಸ್‌ಎಫ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಮಂದಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ದಫ್ ಕುಣಿತದೊಂದಿಗೆ ಪ್ರವಾದಿ ಮುಹಮ್ಮದ್ ಪೈಗಂಬರರ ಸ್ತುತಿಗೀತೆಗಳನ್ನು ಹಾಡಲಾಯಿತು. ವಿವಿಧ ಮದರಸಾಗಳ ವಿದ್ಯಾರ್ಥಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.
ಬಂದರ್ ರಸ್ತೆಯ ಈದ್ಗಾ ಮೈದಾನದಿಂದ ಆರಂಭವಾದ ಮೆರವಣಿಗೆ ಶಮ್ಸುದ್ದೀನ್ ವೃತ್ತ, ಅರ್ಬನ್ ಬ್ಯಾಂಕ್, ಸುಲ್ತಾನ್ ಸ್ಟ್ರೀಟ್, ಚೌಕ್ ಬಜಾರ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿತು. ಬಳಿಕ ಹಳೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಮೈದಾನದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.
ಮರ್ಕಝಿ ಮೀಲಾದ್ ಕಮಿಟಿಯ ಸಂಚಾಲಕ ಮುನೀರ್ ಅಹ್ಮದ್ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಖಾಜಾ ಹಸನ್ ಕಲಾಯಿವಾಲೆ, ಅಬ್ದುಲ್ ಅಲೀಮ್ ಗವಾಯಿ, ಇಸ್ಮಾಯಿಲ್ ಹಬೀಬುಲ್ಲಾಹ್, ಡಾ. ಯಾಹ್ಯಾ ಅಸ್ಕರಿ, ಆಸಿಫ್ ಇಕ್ಬಾಲ್ ಕಲಾಯಿವಾಲೆ, ಇದ್ರೀಸ್ ಮೊಹತೆಶಂ ರೊಡ್ಡ, ಮೌಲಾನಾ ಫೈಝಾನ್ ರಝಾ, ನವಾಝ್ ಶಿರಾಲಿ, ಶಫೀಖ್ ಬ್ಯಾರಿ, ಅಶ್ರಫ್ ತೋನ್ಸೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.