ವಿಧಾನಸಭಾ ಉಪಸಭಾಧ್ಯಕ್ಷರಾಗಿ ಮಂಕಾಳ ವೈದ್ಯ ಆಯ್ಕೆ: ಶಿರೂರು ಟೋಲ್‌ನಲ್ಲಿ ಅದ್ದೂರಿ ಸ್ವಾಗತ

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಸಿಹಿ ಹಂಚಿ ಸಂಭ್ರಮ

Update: 2026-08-19 19:14 IST

ಭಟ್ಕಳ: ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ಎಸ್. ವೈದ್ಯ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಂಗಳೂರಿನಿಂದ ಭಟ್ಕಳಕ್ಕೆ ಆಗಮಿಸಿದ ಮಂಕಾಳ ವೈದ್ಯ ಅವರನ್ನು ಮಂಗಳವಾರ ರಾತ್ರಿ ಭಟ್ಕಳ ತಾಲ್ಲೂಕಿನ ಗಡಿಭಾಗವಾದ ಶಿರೂರು ಟೋಲ್ ಬಳಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು ಹಾಗೂ ಹಿತೈಷಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

 ಶಿರೂರು ಟೋಲ್‌ಗೆ ಆಗಮಿಸಿದ ಮಂಕಾಳ ವೈದ್ಯ ಅವರನ್ನು ನೂರಾರು ಮಂದಿ ಹೂವಿನ ಹಾರ ಹಾಕಿ, ಪುಷ್ಪಗುಚ್ಛ ನೀಡಿ ಹಾಗೂ ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಮಂಕಾಳ ವೈದ್ಯ ಅವರು ವಿಧಾನಸಭೆಯ ಮಹತ್ವದ ಉಪಸಭಾಧ್ಯಕ್ಷ ಸ್ಥಾನಕ್ಕೇರಿರುವುದು ಭಟ್ಕಳ–ಹೊನ್ನಾವರ ಕ್ಷೇತ್ರ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ ವೈದ್ಯ ಅವರಿಗೆ ಕಲಾಪಗಳನ್ನು ನಿಯಮಬದ್ಧವಾಗಿ ಹಾಗೂ ಸುಗಮವಾಗಿ ನಡೆಸುವ ಮಹತ್ವದ ಜವಾಬ್ದಾರಿ ದೊರೆತಿದೆ. ಕ್ಷೇತ್ರದ ಶಾಸಕರೊಬ್ಬರು ವಿಧಾನಸಭೆಯ ಪೀಠಾ ಸೀನ ಅಧಿಕಾರಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲೂ ವಿಶೇಷ ಗಮನ ಸೆಳೆದಿದೆ.

ಮಂಕಾಳ ವೈದ್ಯ ಅವರು ಭಟ್ಕಳ–ಹೊನ್ನಾವರ ಕ್ಷೇತ್ರದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಹಾಗೂ ಶಾಸಕರಾಗಿ ಸೇವೆ ಸಲ್ಲಿಸಿರುವ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯ ಗಳಿಗೆ ಆದ್ಯತೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಬಳಿಕ ರಾಜ್ಯ ಸರ್ಕಾರದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಇದೀಗ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ಜವಾಬ್ದಾರಿ ಮತ್ತಷ್ಟು ವಿಸ್ತರಿಸಿದ್ದು, ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News