ಭಟ್ಕಳ: ಭಟ್ಕಳದ ಶತಮಾನಗಳನ್ನು ಪೂರೈಸಿರುವ ತಂಝಿಮ್ ಸಂಸ್ಥೆಯು ಆ.30 ರಂದು ರಾತ್ರಿ ಇಲ್ಲಿನ ಆಮಿನಾ ಪ್ಯಾಲೇಸ್ ನಲ್ಲಿ ನೂತನವಾಗಿ ಸಚಿವರಾಗಿ ನೇಮಕಗೊಂಡಿರುವ ಯು.ಟಿ. ಖಾದರ್‌ ಹಾಗೂ ನೂತನ ವಿಧಾನಸಭೆಯ ಉಪಸಭಾಪತಿ ಮಂಕಾಳ್ ಎಸ್.ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸನ್ಮಾನ ಸಮಾರಂಭದಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ, ಧಾರ್ಮಿಕ ಸಂಘಟನೆಗಳು, ವಿವಿಧ ಮಸೀದಿ ಜಮಾಅತ್ ಗಳ ಮುಖಂಡರು ಪ್ರತ್ಯೇಕವಾಗಿ ಇಬ್ಬರು ಗಣ್ಯರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ "ರಸ್ತೆ, ಸೇತುವೆ ಅಥವಾ ದೊಡ್ಡ ಕಟ್ಟಡಗಳ ನಿರ್ಮಾಣವಷ್ಟೇ ಸಮಾಜದ ನೈಜ ಅಭಿವೃದ್ಧಿಯಲ್ಲ. ಬದಲಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತ ಸಮುದಾಯಗಳ ಮಕ್ಕಳು ಜಾತಿ-ಮತ ಭೇದ ಮರೆತು ಪರಸ್ಪರ ಕೈ ಕೈ ಹಿಡಿದು ಸೌಹಾರ್ದತೆಯಿಂದ ಜೀವಿಸುವ ವಾತಾವರಣ ಸೃಷ್ಟಿಸುವುದೇ ನಿಜವಾದ ಅಭಿವೃದ್ಧಿ" ಎಂದು ಪ್ರತಿಪಾದಿಸಿದರು.

"ಬೆಂಗಳೂರಿನ ಹಜ್ ಭವನದಲ್ಲಿ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಟ್ಟದ ಇಸ್ಲಾಮಿಕ್ ಮ್ಯೂಸಿಯಂ ಸ್ಥಾಪಿಸಲಾ ಗುವುದು. ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಚರಿತ್ರೆ ಹಾಗೂ ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದರಿ ಪ್ರದರ್ಶನಗಳನ್ನು ಇಲ್ಲಿ ಅಳವಡಿಸಲಾಗುವುದು" ಎಂದು ಕರ್ನಾಟಕ ಸರ್ಕಾರದ ಸಚಿವ ಯು.ಟಿ. ಖಾದರ್ ಘೋಷಿಸಿದರು.

ಸಮಾಜದಲ್ಲಿ ಧರ್ಮ-ಜಾತಿ ಭೇದ ಮರೆತು ಪ್ರೀತಿ, ಸೌಹಾರ್ದತೆ ಬೆಳೆಸುವುದೇ ನೈಜ ಅಭಿವೃದ್ಧಿ ಎಂದ ಅವರು, ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ 'ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ' ಪ್ರತ್ಯೇಕ ಸುಸಜ್ಜಿತ ಕಟ್ಟಡ ನಿರ್ಮಿಸಲು ಶೀಘ್ರ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಹಜ್ ಸಮಿತಿ ಮೂಲಕ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಉಮ್ರಾ ಯಾತ್ರೆ ಹಾಗೂ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣದ ಯೋಜನೆಯನ್ನೂ ಪ್ರಕಟಿಸಿದರು.

ಕ್ಷೇತ್ರದ ಅಭಿವೃದ್ಧಿಗೆ 104 ಕೋಟಿ ಕಾಮಗಾರಿ: ಶಾಸಕ ಮಂಕಾಳ್ ವೈದ್ಯ

ಉಪಸಭಾಧ್ಯಕ್ಷ ಹಾಗೂ ಶಾಸಕ ಮಂಕಾಳ್ ಎಸ್. ವೈದ್ಯ ಮಾತನಾಡಿ, ಕ್ಷೇತ್ರದ ದೀರ್ಘಕಾಲದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು 32 ಕೋಟಿ ರೂ. ವೆಚ್ಚದ ಕಾಮಗಾರಿ ಮಂಜೂರಾಗಿದ್ದು, ಈಗಾಗಲೇ ಶೇ. 90ರಷ್ಟು ಕೆಲಸ ಮುಗಿದಿದೆ. ಮುಂದಿನ 2 ರಿಂದ 3 ತಿಂಗಳಲ್ಲಿ ಇದು ಪೂರ್ಣಗೊಂಡು ಕ್ಷೇತ್ರದ ಜನತೆಗೆ ನಿರಂತರ ವಿದ್ಯುತ್ ಸಿಗಲಿದೆ. ಭಟ್ಕಳದ ಮುಂದಿನ 20 ವರ್ಷಗಳ ಜನಸಂಖ್ಯೆಯ ಬೇಡಿಕೆಯನ್ನು ಗಮನದಲ್ಲಿಟ್ಟು ಕೊಂಡು 37 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಮತ್ತು ಅಂಜುಮನ್ ಗುಡ್ಡದ ಮೇಲೆ ಬೃಹತ್ ಟ್ಯಾಂಕ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಭಟ್ಕಳದ ಜನರ ಬಹುದಿನಗಳ ಬೇಡಿಕೆಯಾಗಿದ್ದ ನಗರಸಭೆ ರಚನೆಯಾಗಿದ್ದು, ಹೆಬ್ಬಳೆ ಮತ್ತು ಜಾಲಿಯನ್ನು ಸೇರಿಸಿ ಪೂರ್ಣಪ್ರಮಾಣದ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ನಗರಸಭೆಯ ಸರ್ವಾಂಗೀಣ ಅಭಿವೃದ್ಧಿಗೆ ಸುಮಾರು 200 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ತಪ್ಪಿಸಲು ಸಣ್ಣ ನೀರಾವರಿ ಇಲಾಖೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಸರಾಬಿ ಹೊಳೆಯ ಹೂಳೆತ್ತಲು ಕಾಂಟ್ರಾಕ್ಟ್ ಫಿಕ್ಸ್ ಆಗಿದ್ದು, ಮಳೆ ಕಡಿಮೆಯಾದ ತಕ್ಷಣ ಕೆಲಸ ಆರಂಭವಾಗಲಿದೆ. ಹಾಗೆಯೇ ಸಾಗರ ರಸ್ತೆ ಹಾಗೂ ಬಂದರ್ ರಸ್ತೆಗಳನ್ನು 25 ಕೋಟಿ ರೂ. ವೆಚ್ಚದಲ್ಲಿ 25 ವರ್ಷ ಬಾಳಿಕೆ ಬರುವಂತೆ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರವೊಂದಕ್ಕೇ ವಾರ್ಷಿಕ ಸುಮಾರು 960 ಕೋಟಿ ರೂ. ಬಿಡುಗಡೆಯಾಗುತ್ತಿದ್ದು, ಇದು ಬಡವರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ

ತಂಝೀಮ್ ಅಧ್ಯಕ್ಷರ ಇನಾಯತುಲ್ಲಾ ಶಾಬಂದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಮುಹಮ್ಮದ್ ಯುನೂಸ್ ಕಾಝಿಯಾ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ತಂಝೀಮ್ ಪ್ರಧಾನ ಕಾರ್ಯದರ್ಶಿ ಅಝೀಝುರ್‍ರಹ್ಮಾನ್ ನದ್ವಿ ಧನ್ಯವಾದ ಅರ್ಪಿಸಿದರು. ನ್ಯಾಯಾವಾದಿ ಇಮ್ರಾನ್ ಲಂಕಾ ಕಾರ್ಯಕ್ರಮ ನಿರೂಪಿಸಿದರು.



 


 


 


 






 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor