ಪ್ರವಾದಿ ಬೋಧಿಸಿದ ತಾಳ್ಮೆಯೇ ಯಶಸ್ಸಿನ ಕಿರೀಟ: ಸಚಿವ ಯು.ಟಿ. ಖಾದರ್
ಭಟ್ಕಳ: "ಒಬ್ಬ ಯಶಸ್ವಿ ರಾಜನ ಕಿರೀಟದಲ್ಲಿ ಎಷ್ಟು ವಜ್ರಗಳಿವೆ ಎನ್ನುವುದು ಮುಖ್ಯವಲ್ಲ; ಆತನಿಗೆ ಎಷ್ಟು ತಾಳ್ಮೆ ಇದೆ ಎನ್ನುವುದೇ ಅವನ ಯಶಸ್ಸಿನ ನೈಜ ಕಿರೀಟವಾಗಿದೆ. ವಿಶ್ವಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶವೂ ಇದೇ ಆಗಿದೆ" ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ರವಿವಾರ ರಾತ್ರಿ ತಂಝೀಮ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕರು ಸೀರತ್ ಅಭಿಯಾನದ ಅಂಗವಾಗಿ ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತಂತೆ ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿದ ಅಬ್ದುಸ್ಸಲಾಮ್ ಪುತ್ತಿಗೆ ಅವರ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಹಾಗೂ ಯೋಗೇಶ್ ಮಾಸ್ಟರ್ ಅವರ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್ (ಸ)’ ಕೃತಿಗಳು ಲೋಕಾರ್ಪಣೆಗೊಳಿಸಿ ಮಾತನಾಡಿದರು.
"ಈ ಎರಡು ಕೃತಿಗಳು ಪ್ರವಾದಿವರ್ಯರ ಸಂದೇಶಗಳನ್ನು ಇಂದಿನ ಸಮಾಜಕ್ಕೆ ಪರಿಚಯಿಸಲು ಇರುವ ದೊಡ್ಡ ಅವಕಾಶಗಳಾಗಿವೆ" ಎಂದು ಶ್ಲಾಘಿಸಿದರು. ಪ್ರವಾದಿ ಮುಹಮ್ಮದ್ (ಸ) ಅವರ ಬೋಧನೆಗಳನ್ನು ಉಲ್ಲೇಖಿಸಿ ಯುವ ಪೀಳಿಗೆಗೆ ಕಿವಿಮಾತು ಹೇಳಿದ ಯು.ಟಿ. ಖಾದರ್, "ಯುವಕರು ಯಾವುದೇ ಸನ್ನಿವೇಶದಲ್ಲೂ ಭಾವನಾತ್ಮಕತೆಗೆ ಒಳಗಾಗಬಾರದು" ಎಂದರು. ಪ್ರವಾದಿಯವರು ಸಾರಿದ ಸಂದೇಶದಂತೆ, ನಮ್ಮ ಜೀವನದಲ್ಲಿ ಎಂತಹದೇ ಕಷ್ಟ ಗಳು, ಅವಮಾನಗಳು ಅಥವಾ ತೊಂದರೆಗಳು ಎದುರಾದರೂ ಅವು ಕೇವಲ ತಾತ್ಕಾಲಿಕವಾಗಿದ್ದು, ತಾಳ್ಮೆಯಿಂದ ಎದುರಿಸಿದರೆ ಖಂಡಿತ ಪರಿಹಾರ ಸಿಗುತ್ತದೆ ಎಂದು ಪ್ರವಾದಿ ಸಂದೇಶವನ್ನು ನೆನಪಿಸಿದರು.
ಬೆಂಗಳೂರಿನಲ್ಲಿ ಇಂಟರ್ನ್ಯಾಷನಲ್ ಇಸ್ಲಾಮಿಕ್ ಮ್ಯೂಸಿಯಂ: ವಿಶ್ವಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಚರಿತ್ರೆ, ಇತಿಹಾಸ ಮತ್ತು ಅವರ ಮಾನವೀಯ ಸಂದೇಶಗಳ ಸಾರವನ್ನು ಮುಂಬರುವ ತಲೆಮಾರಿಗೆ ತಲುಪಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸಚಿವರು ಪ್ರಕಟಿಸಿದರು. "ಬೆಂಗಳೂರಿನ ಹಜ್ ಹೌಸ್‌ನ ಬೇಸ್‌ಮೆಂಟ್ ಹಾಗೂ ಟಾಪ್ ಫ್ಲೋರ್‌ನಲ್ಲಿ ದೇಶದಲ್ಲೇ ಪ್ರಥಮ ಎನ್ನಬಹುದಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ಮ್ಯೂಸಿಯಂ ಅನ್ನು ಅತ್ಯಂತ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು" ಎಂದು ಘೋಷಿಸಿದರು. ಈ ಮಾದರಿ ಎಕ್ಸಿಬಿಷನ್ ಮೂಲಕ ಮುಂದಿನ ದಿನಗಳಲ್ಲಿ ಎಲ್ಲ ಜಾತಿ ಮತ್ತು ವರ್ಗಗಳ ಮಕ್ಕಳಿಗೆ ಪ್ರವಾದಿಯವರ ಇತಿಹಾಸ ಮತ್ತು ಶಾಂತಿಯ ಸಂದೇಶವನ್ನು ತಿಳಿಸಿಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಎಂ.ಆರ್.ಮಾನ್ವಿ ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾ ಉಪಸಭಾಪತಿ ಮಂಕಾಳ್ ಎಸ್.ವೈದ್ಯ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನಾ ಅಬ್ದುಲ್ ರಬ್ ನದ್ವಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಎಸ್.ಎಂ.ಸೈಯ್ಯದ್ ಝುಬೇರ್ ಮಾರ್ಕೇಟ್, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಮೌಲಾನ ಅಝಿಝುರ್‍ರಹ್ಮಾನ್ ರುಕ್ನುದ್ದೀನ್ ನದ್ವಿ ಇದ್ದರು.