ಆ. 27ರಂದು ಮಿಲ್ಲಿಯಾ ಮಸೀದಿಯಲ್ಲಿ ‘ಪ್ರವಾದಿ ಜೀವನ ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಗಳು’ ಕಾರ್ಯಕ್ರಮ
ಭಟ್ಕಳ: ನವಾಯತ್ ಕಾಲೋನಿಯ ಮಜ್ಲಿಸ್ ಮಿಲ್ಲಿಯಾ ವತಿಯಿಂದ ‘ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಗಳು’ ವಿಷಯದ ಕುರಿತು ವಿಶೇಷ ಧಾರ್ಮಿಕ ಪ್ರವಚನ ಕಾರ್ಯಕ್ರಮ ಆ. 27ರಂದು ರಾತ್ರಿ 9 ಗಂಟೆಗೆ ನವಾಯತ್ ಕಾಲೋನಿಯ ಮಿಲ್ಲಿಯಾ ಮಸೀದಿಯಲ್ಲಿ ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಅತಿಕುರ್‍ರಹ್ಮಾನ್ ಮುನೀರಿ ತಿಳಿಸಿದ್ದಾರೆ.
ಅವರು ಬುಧವಾರ ಮಸೀದಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಖ್ಯಾತ ವಾಗ್ಮಿ ಮೌಲಾನಾ ಅಬು ತಾಲಿಬ್ ರಹ್ಮಾನಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ಬೋಧನೆಗಳ ಬೆಳಕಿನಲ್ಲಿ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ ಕರ್ತವ್ಯ ಹಾಗೂ ಸಾಮಾ ಜಿಕ ಜವಾಬ್ದಾರಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಪ್ರವಾದಿಯವರ ಬೋಧನೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಹಾಗೂ ಯುವಜನರ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಗಳ ಕುರಿತು ಅವರು ಮಾರ್ಗದರ್ಶನ ನೀಡಲಿದ್ದಾರೆ
ಯುವಜನರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ. ತಾಲೂಕಿನ ವಿವಿಧ ಕ್ರೀಡಾ ಕ್ಲಬ್‌ಗಳ ಯುವಕರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಆ. 27ರಂದು ಇಶಾ ನಮಾಜ್ ಬಳಿಕ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಭಟ್ಕಳ ಸೇರಿದಂತೆ ಶಿರೂರು, ಬೈಂದೂರು, ಮುರುಡೇಶ್ವರ, ಮಂಕಿ ಮತ್ತಿತರ ಪ್ರದೇಶಗಳ ಸಾರ್ವಜನಿಕರು ಹಾಗೂ ಯುವಕರು ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಮುನೀರಿ ಕೋರಿದ್ದಾರೆ.