ಭಟ್ಕಳ: ಜಾಗ ವಿವಾದದ ಹಿನ್ನೆಲೆ; ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು
ಭಟ್ಕಳ: ಮಾರುಕೇರಿ ಗ್ರಾಮದ ಹೆಜ್ಜಲು ಪ್ರದೇಶದಲ್ಲಿ ಜಾಗ ಸಂಬಂಧಿತ ವಿವಾದ ನ್ಯಾಯಾಲಯದಲ್ಲಿ ಪ್ರಚಲಿತ ದಲ್ಲಿರುವ ನಡುವೆಯೇ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀಮತಿ ಸುಜಾತಾ ರವಿ ಗೊಂಡ (39) ಅವರು ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಪತಿ ರವಿ ನಾಗಪ್ಪ ಗೊಂಡ ಹಾಗೂ ಅಣ್ಣ ಶಿವರಾಮ ನಾಗಪ್ಪ ಗೊಂಡ ಧನದ ಕೊಟ್ಟಿಗೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ, ಜಾಗದ ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಆರೋಪಿತರು ಏಕಾಏಕಿ ದಾಳಿ ನಡೆಸಿದ್ದಾರೆ.
ಆರೋಪಿತರು ಬುಲೆರೋ ವಾಹನದ ಗ್ಲಾಸ್‌ನ್ನು ಒಡೆದು, ರಾಡಿನಿಂದ ಕಣ್ಣಿನ ಮೇಲೆ ಹೊಡೆದು ತೀವ್ರ ರಕ್ತಗಾಯ ಪಡಿಸಿದ್ದಲ್ಲದೆ, ಬಳಿಕ ಕಲ್ಲಿನಿಂದ ತಲೆಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ತಡೆಯಲು ಮುಂದಾದ ಸುಜಾತಾ ಗೊಂಡ ಅವರನ್ನು ದೂಡಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ, ಪ್ರಕರಣ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಇದೆ.
ಹಲ್ಲೆಯಿಂದ ಗಾಯಗೊಂಡ ಶಿವರಾಮ ನಾಗಪ್ಪ ಗೊಂಡ (ಸುಮಾರು 50) ಅವರಿಗೆ ತಲೆಗೆ ಗಂಭೀರ ಗಾಯಗಳಾ ಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರವಿ ನಾಗಪ್ಪ ಗೊಂಡ (42) ಹಾಗೂ ಸುಜಾತಾ ರವಿ ಗೊಂಡ ಸೇರಿದಂತೆ ಇತರರಿಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಹೆಜ್ಜಲು–ಮಾರುಕೇರಿ ನಿವಾಸಿಗಳಾದ ಮಾದೇವ ಮಂಜು ಗೊಂಡ, ನಾರಾಯಣ ಮಂಜು ಗೊಂಡ, ಸದಾನಂದ ನಾಗಪ್ಪ ಗೊಂಡ, ನಾಗಪ್ಪ ಸಣ್ಣು ಗೊಂಡ ಹಾಗೂ ಅನಂತ ತಿಮ್ಮಪ್ಪ ಗೊಂಡ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.