×
Ad

ಭಟ್ಕಳದಲ್ಲಿ ಮನೆಗೆ ನುಗ್ಗಿ ಕಳ್ಳತನ; 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Update: 2025-12-31 23:38 IST

ಭಟ್ಕಳ: ಮಂಗಳೂರಿನ ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಭಟ್ಕಳದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ನಗರದ ಪುರವರ್ಗಾ ಚರ್ಚ್ ಹಿಂಭಾಗದಲ್ಲಿರುವ, ಪತ್ರಿಕಾ ವಿತರಕ ಫ್ರಾನ್ಸಿಸ್ ಡಿಸೋಜಾ ಅವರ ನಿವಾಸದಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಡಿಸೋಜಾ ದಂಪತಿ ಮನೆಗೆ ಬೀಗ ಹಾಕಿ ಮಂಗಳೂರಿಗೆ ತೆರಳಿದ್ದರು. ಬುಧವಾರ ಮುಂಜಾನೆ ಮನೆಗೆ ಹಿಂತಿರುಗಿದ ವೇಳೆ, ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಮನೆಯೊಳಗೆ ಪ್ರವೇಶಿಸಿದಾಗ ಮಲಗುವ ಕೋಣೆಯ ಕಪಾಟನ್ನು ಮುರಿದು ಒಳಗಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಪರಿಶೀಲನೆ ನಡೆಸಿದಾಗ, ಕಪಾಟಿನಲ್ಲಿ ಇರಿಸಿದ್ದ ಸುಮಾರು 9 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಭಟ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗಾಗಿ ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕೂಡ ಕರೆಸ ಲಾಗಿದೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News