ಎಲ್.ಎಸ್. ನಾಯ್ಕ ಮುಂಡಳ್ಳಿ ನಿಧನ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಹಿರಿಯ ಮುಖಂಡ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ಎಲ್.ಎಸ್. ನಾಯ್ಕ ಮುಂಡಳ್ಳಿ (85) ಅವರು ಶುಕ್ರವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳ ಕಾಲ ಸಕ್ರಿಯರಾಗಿದ್ದ ಅವರು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಭಟ್ಕಳ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ನಾಮಧಾರಿ ಸಮಾಜದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಗುರುಮಠದ ಪರಮ ಭಕ್ತರಾಗಿದ್ದ ಎಲ್.ಎಸ್. ನಾಯ್ಕ ಅವರು ನಿಚ್ಚಲಮಕ್ಕೀ ಶ್ರೀ ತಿರುಮಲ ವೆಂಕಟ್ರಮಣ ದೇವರಿಗೆ ಬೆಳ್ಳಿಯ ಪಾಲಕಿ ಹಾಗೂ ಶ್ರೀ ದೇವರಿಗೆ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಕುಲಗುರುಗಳಾದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪರಮ ಶಿಷ್ಯರಾಗಿದ್ದ ಅವರು, ಭಟ್ಕಳದ ಕರಿಕಲ್ ಪ್ರದೇಶದಲ್ಲಿ ಶ್ರೀ ಗುರುಮಠದ ವತಿಯಿಂದ ಧ್ಯಾನ ಮಂದಿರ ನಿರ್ಮಾಣಕ್ಕೆ ಉಚಿತವಾಗಿ ಭೂಮಿಯನ್ನು ದಾನವಾಗಿ ನೀಡಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಅನೇಕ ಬಡವರಿಗೆ ಸಹಾಯ ಹಸ್ತ ಚಾಚುತ್ತಾ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ್ದರು. ಅವರ ಸಮಾಜಮುಖಿ ಸೇವೆಗಳು ಅವರಿಗೆ ಜನಮಾನಸದಲ್ಲಿ ಉತ್ತಮ ಗೌರವ ಮತ್ತು ಹೆಸರು ತಂದುಕೊಟ್ಟಿದ್ದವು.
ಮೃತರು ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಮಾಜದ ಮುಖಂಡರು, ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸಾರ್ವಜನಿಕ ವಲಯದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.