ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಭಟ್ಕಳ: ಮೀನುಗಾರಿಕೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಮಾವಿನಕುರ್ವಾ ಬಂದರಿನಲ್ಲಿ ಮಂಗಳವಾರ ನಡೆದಿದೆ.
ಕಾಯ್ಕಿಣಿ ಮೂಡಕೇರಿ ಬಸ್ತಿ ನಿವಾಸಿ ಶಂಕರ ಸಣ್ಣತಮ್ಮ ನಾಯ್ಕ (40) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಶಂಕರ ನಾಯ್ಕ ಅವರು ರಾತ್ರಿ ಮೀನುಗಾರಿಕೆಗೆ ತೆರಳುವ ಉದ್ದೇಶದಿಂದ ಬಂದರಿನಲ್ಲಿ ನಿಲ್ಲಿಸಿದ್ದ ಬೋಟ್ ಬಳಿ ಬಲೆಗಳನ್ನು ಸಿದ್ಧಪಡಿಸುತ್ತಿದ್ದರು. ಈ ವೇಳೆ ದಕ್ಕೆಯಿಂದ (ಜೆಟ್ಟಿ) ಬೋಟ್‌ಗೆ ಹತ್ತುವಾಗ, ದಕ್ಕೆ ಮತ್ತು ಬೋಟಿನ ಮಧ್ಯೆ ಆಳವಾದ ನೀರಿನ ಭಾಗದಲ್ಲಿ ಅಚಾನಕ್ಕಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆ ಬರಲು ಸಾಧ್ಯವಾಗದೇ ಅವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ 112 ತುರ್ತು ಸೇವೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತ್ನಿ ಗಿರಿಜಾ ಅವರು ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.