ಗೋಕರ್ಣ: ಸಮುದ್ರದ ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಮೃತ್ಯು
ಗೋಕರ್ಣ: ಸಮುದ್ರಕ್ಕೆ ಇಳಿದು ಈಜುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಮೂವರು ಪ್ರವಾಸಿಗರು ಮುಳುಗಿ ಮೃತಪಟ್ಟಿರುವ ಘಟನೆ ಗೋಕರ್ಣದ ದುಬ್ಬನಶಸಿ ಕಡಲತೀರದಲ್ಲಿ ನಡೆದಿದೆ.
ಮೃತರನ್ನು ವಿಶ್ವೇಶ್ (24), ಶೋಭಾ ದಾಸ್ (22) ಹಾಗೂ ಮೊಹಮ್ಮದ್ ಅಕ್ರಂ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಸುಮಾರು 12 ಮಂದಿಯ ತಂಡ ಗೋಕರ್ಣಕ್ಕೆ ಪ್ರವಾಸಕ್ಕಾಗಿ ಆಗಮಿಸಿತ್ತು. ಪ್ರವಾಸದ ಅಂಗವಾಗಿ ದುಬ್ಬನಶಸಿ ಕಡಲತೀರಕ್ಕೆ ತೆರಳಿದ್ದ ಯುವಕರು ಸಮುದ್ರದಲ್ಲಿ ಇಳಿದು ಈಜುತ್ತಾ ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಸಮುದ್ರದ ಅಲೆಗಳ ಅಬ್ಬರ ಹಾಗೂ ನೀರಿನ ಸೆಳೆತಕ್ಕೆ ಸಿಲುಕಿದ ಮೂವರು ದಡಕ್ಕೆ ಮರಳಲಾಗದೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಕೂಡಲೇ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.