ಹೊನ್ನಾವರ: ಶರಾವತಿ ಸೇತುವೆ ಮೇಲೆ ಟ್ಯಾಂಕರ್- ಬೈಕ್ ಢಿಕ್ಕಿ; ಸವಾರ ಮೃತ್ಯು
ಹೊನ್ನಾವರ: ಶರಾವತಿ ನದಿಯ ಮೇಲಿನ ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಗುಂಡಬಾಳ ಮುಟ್ಟದ ನಿವಾಸಿ ಜಾನ್ ಲೂಯಿಸ್ (61) ಎಂದು ಗುರುತಿಸಲಾಗಿದೆ. ಮೀನು ವ್ಯಾಪಾರಿಯಾಗಿದ್ದ ಅವರು, ನಿತ್ಯದಂತೆ ಕಾಸರಕೋಡ್‌ಗೆ ತೆರಳಿ ಮೀನು ಖರೀದಿಸಿ ಹೊನ್ನಾವರಕ್ಕೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಅಪಘಾತದ ವಿವರ:
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮಂಗಳೂರು ಭಾಗದಿಂದ ಗುಲಬರ್ಗಾ ಕಡೆಗೆ ಗ್ಯಾಸ್ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಅನ್ನು ಓವರ್‌ಟೇಕ್ ಮಾಡಲು ಜಾನ್ ಲೂಯಿಸ್ ಯತ್ನಿಸಿದ್ದರು. ಈ ವೇಳೆ ಎದುರು ದಿಕ್ಕಿನಿಂದ ಕಾರೊಂದು ಬರುತ್ತಿದ್ದುದರಿಂದ ಅವರು ಬೈಕ್ ಅನ್ನು ಎಡಬದಿಗೆ ತಿರುಗಿಸಿದರು. ನಿಯಂತ್ರಣ ತಪ್ಪಿದ ಬೈಕ್ ಸವಾರನ ಕಾಲು ಟ್ಯಾಂಕರ್ ಹಿಂಭಾಗದ ಚಕ್ರಕ್ಕೆ ಸಿಲುಕಿದ್ದು, ಟ್ಯಾಂಕರ್ ಚಕ್ರ ಅವರ ಮೇಲೆ ಹರಿದು ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಶರಾವತಿ ಸೇತುವೆಯಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 2025 ಜನವರಿ ತಿಂಗಳ ಆರಂಭದಲ್ಲೇ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಳವಡಿಸಲಾಗಿದ್ದ ರಸ್ತೆ ದೀಪಗಳು ಹಾಗೂ ಡಿವೈಡರ್‌ಗಳು ಭಾರೀ ವಾಹನಗಳ ಢಿಕ್ಕಿಯಿಂದ ಹಾನಿಗೊಂಡಿದ್ದು, ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಸ್ಥಳೀಯರು ಹಲವಾರು ವರ್ಷಗಳಿಂದ ಹಳೆಯ ಶರಾವತಿ ಸೇತುವೆಯನ್ನು ಲಘು ವಾಹನಗಳಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಮತ್ತು ಹೊಸ ಸೇತುವೆಯ ಮೇಲಿನ ಒತ್ತಡ ಕಡಿಮೆ ಮಾಡದಿದ್ದರೆ ಇಂತಹ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.