ಮುರುಡೇಶ್ವರ | ಮೀನುಗಾರಿಕಾ ಬೋಟ್ ಮುಳುಗಡೆ: ಏಳು ಮಂದಿಯ ರಕ್ಷಣೆ
Update: 2025-12-22 20:26 IST
ಸಾಂದರ್ಭಿಕ ಚಿತ್ರ
ಮುರುಡೇಶ್ವರ,ಡಿ.22:ನಗರದ ಮೀನುಗಾರಿಕೆ ಬಂದರ್ ನಿಂದ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಮೈಶಾ-2 ಹೆಸರಿನ ಮೀನುಗಾರಿಕಾ ಬೋಟ್ ಶನಿವಾರ ಮುಂಜಾವ ಮುರುಡೇಶ್ವರ ಸಮೀಪ ಮುಳುಗಡೆಯಾಗಿದೆ.
ನಗರದ ಬಂದರು ಅಝೀಝುದ್ದೀನ್ ರಸ್ತೆಯ ನಿವಾಸಿ ಮುಹಮ್ಮದ್ ಶರೀಕ್ ಉಲ್ ಇಸ್ಲಾಂ ಎಂಬವರಿಗೆ ಸೇರಿದ ಬೋಟ್ ಡಿ.16ರಂದು ಆಂಧ್ರ ಪ್ರದೇಶ ಮೂಲದ ಚಾಲಕ ಮತ್ತು 6 ಮಂದಿ ಮೀನುಗಾರರು ಬಂದರಿನಿಂದ ತೆರಳಿದ್ದರು. ಡಿ.20ರಂದು ಮುರುಡೇಶ್ವರದಿಂದ ಸುಮಾರು 14 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮುಂಜಾವ 3.15ರ ವೇಳೆಗೆ ಸಮುದ್ರದ ರಭಸವಾದ ಅಲೆಗೆ ಸಿಕ್ಕಿ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ನಲ್ಲಿದ್ದವರನ್ನು ಇನ್ನೊಂದು ಬೋಟ್ ನ ಮೀನುಗಾರರು ರಕ್ಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.