ಜನ ಸಾಮಾನ್ಯರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸಿ : ಅಂಜುಮನ್ 106ನೇ ವರ್ಷಾಚರಣೆಯಲ್ಲಿ ಯು.ಟಿ.ಖಾದರ್ ಕರೆ
ಭಟ್ಕಳ, ಡಿ.13: ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾನ್ಯ ಜನರ ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸುವುದು ನಿಜವಾದ ದೇಶಪ್ರೇಮ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಭಟ್ಕಳದ ಅಂಜುಮನ್ ಹಾಮೀಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ 106ನೇ ವರ್ಷಾಚರಣೆ ಅಂಗವಾಗಿ ಶನಿವಾರ ಆಯೋಜಿಸಲಾದ ‘ಅಂಜುಮನ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕ್ಲಾಸ್‌ರೂಂ ಮತ್ತು ಪ್ಲೇ ಗ್ರೌಂಡ್‌ನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಬಲಿಷ್ಠರಾದಾಗಲೇ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.
ಅಂಜುಮನ್ ಸಂಸ್ಥೆಯು ಭಟ್ಕಳ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆ ಮತ್ತು ಗ್ರಾಮಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಶಂಸಿಸಿದ ಯು.ಟಿ.ಖಾದರ್, ವಿದ್ಯಾರ್ಥಿಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಇಂಜಿನಿಯರ್, ವೈದ್ಯ, ವಕೀಲ, ಐಎಎಸ್ ಅಧಿಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಭಟ್ಕಳದಲ್ಲಿ ಬಹು ಸೌಲಭ್ಯ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ ಇರುವುದರಿಂದ ಅಂಜುಮನ್ ಸಂಸ್ಥೆಯ ಬಳಿ ಜಾಗ ಮತ್ತು ಮೂಲಸೌಕರ್ಯ ಇರುವ ಹಿನ್ನೆಲೆಯಲ್ಲಿ ಸರಕಾರ ಬೆಂಬಲ ನೀಡಲಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಲಾ ಕಾಲೇಜಿನ ಅಗತ್ಯವನ್ನೂ ಅಂಜುಮನ್ ಪ್ರಸ್ತಾವಿಸಿದ್ದು, ಅದರ ಅವಶ್ಯವನ್ನು ಸಚಿವರು ಒಪ್ಪಿಕೊಂಡರು.
ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯೂನುಸ್ ಕಾಝಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಕದೀರ್ ಹಾಗೂ ಕರ್ನಾಟಕ ವಿಶ್ವವಿದ್ಯಾಇಲಯದ ಉಪಕುಲಪತಿ ಡಾ.ಎ.ಎಂ.ಖಾನ್ ಉಪಸ್ಥಿತರಿದ್ದರು.