ಗೋಕರ್ಣದಲ್ಲಿ ಪ್ರವಾಸಿಗರ ಹೆಚ್ಚಳ: ವಾಹನ ಸಂಚಾರ ದಟ್ಟಣೆ
ಗೋಕರ್ಣ, ಡಿ.16: ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಗೋಕರ್ಣಕ್ಕೆ ಬರುತ್ತಿದ್ದು, ಇದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ.
ಇದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದು, ಹೀಗಾಗಿ ಎಲ್ಲಿ ನೋಡಿದರೂ ಪ್ರವಾಸಿಗರ ದಂಡು ಕಾಣುವಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಮುಖ್ಯ ಕಡಲ ತೀರದಲ್ಲಿ ಕಂಡುಬರುತ್ತಿದ್ದಾರೆ.
ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದ್ದು, ಈಗಾಗಲೇ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಗೋಕರ್ಣಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ವಿಫಲವಾಗಿದೆ. ಕೆಲವು ಪ್ರಮುಖ ಬೀಚ್‌ಗಳಲ್ಲಿ ಸಾರ್ವಜನಿಕ ಶೌಚಾಲಯ, ಸ್ನಾನಗೃಹದ ಸೌಲಭ್ಯವೂ ಇಲ್ಲದಿರುವುದರಿಂದ ಅನಿವಾರ್ಯವಾಗಿ ಹೊಟೇಲ್, ಹೋಮ್‌ಸ್ಟೇಗಳಿಗೆ ತೆರಳಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗೋಕರ್ಣಕ್ಕೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಪಾರಂಪರಿ ಕವಾಗಿ ಹಾಗೂ ಪ್ರವಾಸೋದ್ಯಮದಿಂದಲೂ ಅತ್ಯಂತ ಆಕರ್ಷಣೀಯ ತಾಣವಾಗಿದೆ. ಆದರೆ ಇಲ್ಲಿ ಮೂಲ ಸೌಕರ್ಯ ಇಲ್ಲದೇ ಪ್ರವಾಸಿಗರಿಗೆ ಸಮಸ್ಯೆ ಉಂಟಾಗುತ್ತಿದೆ. ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು ಗೋಕರ್ಣದ ಸಮಸ್ಯೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕು.
-ರಾಜಗೋಪಾಲ ಅಡಿ ಗುರೂಜಿ, ಅಧ್ಯಕ್ಷರು, ಆನುವಂಶೀಯ ಉಪಾಧಿವಂತ ಮಂಡಳ ಗೋಕರ್ಣ