×
Ad

ಭಟ್ಕಳದಲ್ಲಿ ಆಹಾರ ಸುರಕ್ಷತಾ ತರಬೇತಿ ಶಿಬಿರ; ಎಲ್ಲಾ ಆಹಾರ ವ್ಯವಹಾರ ನಿರ್ವಾಹಕರಿಗೆ ಪರವಾನಗಿ ಕಡ್ಡಾಯ

Update: 2025-12-05 14:45 IST

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹಾಗೂ ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್ ಒಕ್ಕೂಟದಲ್ಲಿ ಗುರುವಾರ ಭಟ್ಕಳ ಸಿದ್ದೀಕ್ ಸ್ಟ್ರೀಟ್‌ನ ತಂಝೀಂ ಹಾಲ್‌ನಲ್ಲಿ ಏಕದಿನ ಆಹಾರ ಸುರಕ್ಷತಾ ತರಬೇತಿ ಶಿಬಿರ ನಡೆಯಿತು.

ಹೋಟೆಲ್ , ಕ್ಯಾಂಟೀನ್, ಬೇಕರಿಗಳು ಸೇರಿದಂತೆ ವಿವಿಧ ಆಹಾರ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಆಹಾರ ಸುರಕ್ಷತಾ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಆಯೋಜಕರ ಮಾಹಿತಿಯಂತೆ, ತರಬೇತಿಯನ್ನು ಬೆಳಗಿನ ಹಾಗೂ ಮಧ್ಯಾಹ್ನದಂತೆ ಎರಡು ಅವಧಿಗಳಲ್ಲಿ ನಡೆಸಲಾಗಿದ್ದು, ಪ್ರತಿ ಅವಧಿಗೂ ಸುಮಾರು 100 ಮಂದಿ ಭಾಗವಹಿಸಿದರು. ಒಟ್ಟು 200 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಆಹಾರ ಸುರಕ್ಷತಾ ಮಾನದಂಡಗಳು, ಸ್ವಚ್ಛತಾ ನಿಯಮಗಳು, ಆಹಾರ ಹ್ಯಾಂಡ್ಲಿಂಗ್ ವಿಧಾನಗಳು, ಸಂಗ್ರಹಣಾ ಕ್ರಮಗಳು ಹಾಗೂ FSSAI (Food Safety and Standards Authority of India) ಮಾರ್ಗಸೂಚಿಗಳಂತೆ ಅಗತ್ಯ ಪರವಾನಗಿ ಮತ್ತು ನೋಂದಣಿಯ ಕುರಿತಾಗಿ ಮಾಹಿತಿ ನೀಡಲಾಯಿತು. ತರಬೇತಿಯನ್ನು ಪೂರ್ಣಗೊಳಿಸಿದ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಬೆಳಿಗ್ಗೆ 10:30ಕ್ಕೆ ಆರಂಭವಾದ ಕಾರ್ಯಕ್ರಮವನ್ನು, ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ರಹೀಲಾ ಸನಾ ಪಟೇಲ್ ಸಸಿ ನೆಟ್ಟು ಉದ್ಘಾಟನೆ ನೆರವೇರಿಸಿದರು. ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನದ್ವಿ, ತಾಲೂಕು ಟ್ರೈನಿಂಗ್ ಸಂಯೋಜಕ ಶಮ್ಸ್ ನವೀದ್ ಸುಂದೇರಿ, ಜಿಲ್ಲಾ ಸಂಯೋಜಕ ಮನೋಜ್ ನಾಯ್ಕ ಹಾಗೂ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಮತ್ತು ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್‌ನ ಸಿಬ್ಬಂದಿಗಳು ಹಾಜರಿದ್ದರು.

ಭಾರತ ಸರ್ಕಾರಕ್ಕೆ ಸೇರಿದ ಫುಡ್ ಸೇಫ್ಟಿ ಟ್ರೈನಿಂಗ್ ಅಂಡ್ ಸರ್ಟಿಫಿಕೇಶನ್ ಸೆಂಟರ್‌ನ ಸಂಪನ್ಮೂಲ ವ್ಯಕ್ತಿ ದೀಪಾ ಶಂಕರಿ, ಆಹಾರ ಸುರಕ್ಷತಾ ನಿಯಮಗಳು ಮತ್ತು FSSAI ನಿಯಮಾವಳಿಗಳ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿದರು. ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ ರಾಜ್ಯ ಮುಖ್ಯಸ್ಥ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ತಮ್ಮ ಭಾಷಣದಲ್ಲಿ ಅವರು “ಸಣ್ಣದಾಗಲಿ ದೊಡ್ಡದಾಗಲಿ ಎಲ್ಲಾ ಆಹಾರ ವ್ಯವಹಾರ ನಿರ್ವಹಕರು (FBOs) ಕಡ್ಡಾಯವಾಗಿ ಪರವಾನಗಿ ಅಥವಾ ನೋಂದಣಿಯನ್ನು ಪಡೆಯಬೇಕು” ಎಂದು ಒತ್ತು ನೀಡಿದರು.

 



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News