×
Ad

ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯ : ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶ

Update: 2025-12-06 23:36 IST

ಕಾರವಾರ, ಡಿ.6: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ಕಾರವಾರದಲ್ಲಿ ಅರಣ್ಯವಾಸಿಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದಲೂ ಆಗಮಿಸಿ, ಭೂಮಿ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಸಮಾವೇಶದಲ್ಲಿ ಪಾಲ್ಗೊಂಡ ಅರಣ್ಯವಾಸಿಗಳು ಸರಕಾರವನ್ನು ಒತ್ತಾಯಿಸಿದರು.

ಸಮಾವೇಶಕ್ಕೂ ಮುನ್ನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು.

ನಗರದ ರವೀಂದ್ರನಾಥ ಟ್ಯಾಗೋರ್ ಬಳಿಯಿಂದ ಸಾಗಿದ ಜಾಥಾದಲ್ಲಿ ಘೋಷಣೆ, ಬೇಡಿಕೆ ಮತ್ತು ಹಕ್ಕೊತ್ತಾಯದ ಧ್ವನಿ ಮೊಳಗಿದವು. ಜಾತಿ, ಮತ, ಪಂಥ, ಬೇಧ ಭಾವವಿಲ್ಲದೆ ಒಗ್ಗಟ್ಟಾಗಿ ಸಹಸ್ರಾರರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಿದ್ದರು. ಜಾಥಾವು ಮಾಲಾದೇವಿ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು. ವಿವಿಧ ಅರಣ್ಯವಾಸಿಗಳ ಕಲಾ ತಂಡವು ಐತಿಹಾಸಿಕ ಅರಣ್ಯವಾಸಿಗಳ ಸಮಾವೇಶಕ್ಕೆ ಮೆರುಗು ತಂದವು.

ಮೆರವಣಿಯಲ್ಲಿ ಹೋರಾಟಗಾರರ ವೇದಿಕೆಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಮುಂಡಗೊಡ ಅಧ್ಯಕ್ಷ ಶಿವಾನಂದ ಜೋಗಿ ಮುಂಡಗೋಡ, ಅಂಕೋಲಾ ಅಧ್ಯಕ್ಷ ರಮಾನಂದ ನಾಯಕ ಅಚವೆ, ಯಲ್ಲಾಪುರ ಅಧ್ಯಕ್ಷ ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರಂಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಫೀಕ್ ಗಫಾರ್, ಪ್ರಭಾಕರ ವೇಳಿಪ್ ಜೋಯಿಡಾ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲಾ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಮತ್ತಿತರರು ಹಾಜರಿದ್ದರು.


ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪ ಸಲ್ಲಿಕೆ

ಅರಣ್ಯ ಹಕ್ಕು ಕಾಯ್ದೆ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಅರಣ್ಯವಾಸಿಗಳು, ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ವೈಯಕ್ತಿಕವಾಗಿ ಆಕ್ಷೇಪ ಪತ್ರ ಸಲ್ಲಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News