ಭಟ್ಕಳ| ಆಯುಷ್ಮಾನ್ ಭಾರತ ಯೋಜನೆಯಲ್ಲಿ ಸಾಧನೆ: ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರಿಂದ ಸನ್ಮಾನ

Update: 2026-07-26 21:21 IST

ಭಟ್ಕಳ: ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಯೋಜನೆಯ ರಾಜ್ಯಮಟ್ಟದ ಪ್ರಗತಿ ಮೌಲ್ಯಮಾಪನದಲ್ಲಿ ಗಮನಾರ್ಹ ಸಾಧನೆ ಮಾಡಿದ ಭಟ್ಕಳ ತಾಲ್ಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಭಟ್ಕಳ ಆಟೋ ಚಾಲಕರ–ಮಾಲಕರ ಸಂಘದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಯೋಜನೆಯ ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಹಾಗೂ ರಾಜ್ಯಮಟ್ಟದಲ್ಲಿ 37ನೇ ಸ್ಥಾನ ಪಡೆದಿ ರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣಕುಮಾರ, ಮಕ್ಕಳ ತಜ್ಞೆ ಡಾ. ಸುರಕ್ಷಿತ ಶೆಟ್ಟಿ ಹಾಗೂ ಸಿಬ್ಬಂದಿ ವಿಶ್ವನಾಥ ಅವರನ್ನು ಸಂಘದ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೈದ್ಯರು, ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿಯ ತಂಡದ ಪರಿಶ್ರಮ ದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆಯೂ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಬದ್ಧರಾಗಿರುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, "ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಲಭಿಸಿರುವ ಈ ಸಾಧನೆ ತಾಲ್ಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಇದೇ ಸಮರ್ಪಣಾ ಮನೋಭಾವ ದಿಂದ ಸೇವೆ ಮುಂದುವರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಗಳಿಸಲಿ" ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ನಾಯ್ಕ ಮತ್ತು ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ಖಜಾಂಚಿ ಲೋಕೇಶ ನಾಯ್ಕ, ಸದಸ್ಯ ಫಯಾಝ್ ಹಾಗೂ ಆಟೋ ಚಾಲಕರ–ಮಾಲಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News