ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ನಾಯಕ್ ನಿಧನ
ಭಟ್ಕಳ: ಹಿರಿಯ ವೈದ್ಯ, ಭಟ್ಕಳ ಎಜುಕೇಶನ್ ಟ್ರಸ್ಟ್ (ಬಿಇಟಿ) ಅಧ್ಯಕ್ಷ ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖ ಮುಖಂಡರಾಗಿದ್ದ ಡಾ. ಸುರೇಶ್ ವಿ. ನಾಯಕ್ (84) ಅವರು ರವಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸುಮಾರು 55 ವರ್ಷಗಳ ಕಾಲ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಬೆಳವಣಿಗೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದ ಡಾ. ಸುರೇಶ್ ನಾಯಕ್ ಅವರು, ದೂರದೃಷ್ಟಿಯ ನಾಯಕತ್ವ, ನಿಸ್ವಾರ್ಥ ಸೇವೆ ಹಾಗೂ ಶಿಕ್ಷಣದ ಮೇಲಿನ ಬದ್ಧತೆ ಯಿಂದ ಟ್ರಸ್ಟ್ ಅನ್ನು ಗಮನಾರ್ಹವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಂದೇ ಶಿಕ್ಷಣ ಸಂಸ್ಥೆಯಿಂದ ಆರಂಭವಾದ ಟ್ರಸ್ಟ್, ಅವರ ಮಾರ್ಗದರ್ಶನದಲ್ಲಿ ಇಂದು ಏಳು ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿ, 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲು ಅವರು ಕಾರಣರಾಗಿದ್ದರು.
ಶಿಕ್ಷಣ ಕ್ಷೇತ್ರದ ಜೊತೆಗೆ ಸುಮಾರು ಐದು ದಶಕಗಳ ಕಾಲ ವೈದ್ಯಕೀಯ ವೃತ್ತಿಯ ಮೂಲಕವೂ ಜನಸೇವೆ ಸಲ್ಲಿಸಿದ್ದ ಅವರು, ಸರಳತೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಸರಾಗಿದ್ದರು. ಎಲ್ಲ ಸಮುದಾಯದವ ರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಅವರು ಭಟ್ಕಳದ ಜನಾನುರಾಗಿ ವೈದ್ಯರಾಗಿ ಗುರುತಿಸಿಕೊಂಡಿದ್ದರು.
ಡಾ. ಸುರೇಶ್ ನಾಯಕರ ಪಾರ್ಥಿವ ಶರೀರಕ್ಕೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಶಾಸಕ ಮಂಕಾಳ ವೈದ್ಯ ಸೇರಿದಂತೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಾಪ ಸೂಚಿಸಿದರು.
ಡಾ. ಸುರೇಶ್ ನಾಯಕರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮರ್ಕಝಿ ಖಲಿಫಾ ಜಾಮಿಯಾ ಮಸೀದಿಯ ಖತೀಬ್ ಹಾಗೂ ಇಮಾಮ್ ಮೌಲಾನಾ ಖ್ವಾಜಾ ಮುಈನುದ್ದೀನ್ ಅಕ್ರಮಿ ಮದನಿ ನದ್ವಿ, "ಡಾ. ಸುರೇಶ್ ನಾಯಕ ಅವರು ಸುಮಾರು ಐದು ದಶಕಗಳ ಕಾಲ ವೈದ್ಯಕೀಯ ಸೇವೆಯ ಮೂಲಕ ಜನಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವ. ಎಲ್ಲ ಧರ್ಮದವರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಅವರು ಧಾರ್ಮಿಕ ಸಹಿಷ್ಣುತೆ ಮತ್ತು ಸೌಹಾರ್ದದ ಪ್ರತೀಕವಾಗಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ" ಎಂದು ಹೇಳಿದ್ದಾರೆ.
ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಜೀಜುರ್ ರಹ್ಮಾನ್ ರುಕ್ನುದ್ದೀನ್ ಜಂಟಿ ಸಂತಾಪ ಸಂದೇಶದಲ್ಲಿ, "ಡಾ. ಸುರೇಶ್ ನಾಯಕ ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸುವ ಕಾರ್ಯದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದರು. ಎಲ್ಲ ಸಮುದಾಯದವರನ್ನು ಸಮಾನವಾಗಿ ಕಾಣುವ ಅವರ ಗುಣ ಎಲ್ಲರಿಗೂ ಮಾದರಿಯಾಗಿತ್ತು" ಎಂದು ತಿಳಿಸಿದ್ದಾರೆ.
ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶಕುಮಾರ್ ನಾಯ್ಕ್, "ಡಾ. ಸುರೇಶ್ ನಾಯಕರ ಅಗಲಿಕೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ತುಂಬಲಾರದ ಶೂನ್ಯ ಉಂಟಾಗಿದೆ. ಕೆ.ಜಿ.ಯಿಂದ ಪಿ.ಜಿ.ವರೆಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗ ಬೇಕು ಎಂಬುದು ಅವರ ಬಹುದೊಡ್ಡ ಕನಸಾಗಿತ್ತು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ" ಎಂದು ಹೇಳಿದ್ದಾರೆ.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್. ಮಾನ್ವಿ, "ಡಾ. ಸುರೇಶ್ ನಾಯಕ ಅವರು ಸಜ್ಜನಿಕೆ, ಸರಳತೆ ಮತ್ತು ಸೇವಾ ಮನೋಭಾವಕ್ಕೆ ಹೆಸರಾಗಿದ್ದ ಅಪರೂಪದ ವ್ಯಕ್ತಿ. ಅವರ ಬದುಕು ಸಮಾಜಕ್ಕೆ ಆದರ್ಶವಾಗಿತ್ತು. ಭಗವಂತನು ಅವರ ಸತ್ಕಾರ್ಯಗಳನ್ನು ಸ್ವೀಕರಿಸಿ, ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಡಾ. ಸುರೇಶ್ ನಾಯಕರ ನಿಧನಕ್ಕೆ ಶಿಕ್ಷಣ ಕ್ಷೇತ್ರದ ಗಣ್ಯರು, ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿ ಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಭಟ್ಕಳದ ಶೈಕ್ಷಣಿಕ, ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಅವರು ನೀಡಿದ ಸೇವೆ ಮತ್ತು ಕೊಡುಗೆ ಸದಾ ಚಿರಸ್ಮರಣೀಯವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.