ಶಿಸ್ತುಬದ್ಧ ಜೀವನವೇ ಉತ್ತಮ ಭವಿಷ್ಯಕ್ಕೆ ಅಡಿಪಾಯ: ರಾಜೇಶ್ ನಾಯ್ಕ್
ಭಟ್ಕಳ: ಶಿಸ್ತುಬದ್ಧ ಜೀವನ, ನಿರಂತರ ಅಧ್ಯಯನ, ಸಮತೋಲಿತ ಆಹಾರ ಹಾಗೂ ನಿಯಮಿತ ವ್ಯಾಯಾಮ ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ಪೂರಕವಾಗಿದ್ದು, ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದು ತೆರ್ನಮಕ್ಕಿಯ ಕೆ.ಪಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಶ್ ನಾಯ್ಕ್ ಹೇಳಿದರು.
ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಪಾಲಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪ್ರಜ್ವಲ್ ಗೋಲಿ ಮಾತನಾಡಿ, "ಸಿಎ ವೃತ್ತಿಗೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆಯಿದೆ. ಲೆಕ್ಕಪರಿಶೋಧನೆ, ತೆರಿಗೆ, ಹಣಕಾಸು ನಿರ್ವಹಣೆ ಹಾಗೂ ಕಾರ್ಪೊರೇಟ್ ಸಲಹಾ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ" ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ರಮೇಶ್ ಖಾರ್ವಿ ಮತ್ತು ಶ್ರೀಧರ್ ಶಾನಭಾಗ್ ಮಾತನಾಡಿ, ವಿದ್ಯಾರ್ಥಿ ಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಮಹಾವಿದ್ಯಾಲಯದಲ್ಲಿ ನಡೆಯುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು, ಹಾಜರಾತಿ ನಿಯಮಗಳು, ನೇಮಕಾತಿ ಅವಕಾಶಗಳು, ಯುಯುಸಿಎಂಎಸ್ (UUCMS) ವ್ಯವಸ್ಥೆ ಹಾಗೂ ವಿದ್ಯಾರ್ಥಿವೇತನ ಯೋಜನೆಗಳ ಕುರಿತು ವಿವಿಧ ವಿಭಾಗಗಳ ಉಪಪ್ರಾಂಶುಪಾಲರು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಡಿಸೋಜಾ ಅತಿಥಿಗಳನ್ನು ಪರಿಚಯಿಸಿದರು. ದೇವೇಂದ್ರ ಕಿಣಿ ಮತ್ತು ವಿಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ನಿಶಾ ಗೋನ್ಸಾಲಿಸ್ ಹಾಗೂ ಶಾಂತರಾಯ ಗೊಂಡ್ ವಂದಿಸಿದರು.