ಮನೆಯ ಅಂಗಳದಿಂದ ಬೈಕ್ ಕಳವು ಪ್ರಕರಣ; ಆರೋಪಿ ಸೆರೆ
ಭಟ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಭೇದಿಸಿರುವ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಹೆಬಳೆ 4ನೇ ಕ್ರಾಸ್‌ನ ಫಿರ್ದೋಸ್ ನಗರ ನಿವಾಸಿ ಸೈಯದ್ ಅಲಿ (22) ಬಂಧಿತ. ಈತ ಹೆಬಳೆ ಗ್ರಾಮದ ನೆರ್ಲೆಸರ್‌ನ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬೆಳಕೆಯ ಜನತಾ ಕಾಲೋನಿ ನಿವಾಸಿ ಲೋಹಿತ್ ಸುಬ್ಬಯ್ಯ ಮೊಗೇರ (26) ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ. ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ಭರಮಪ್ಪ ಬೆಳಗಲಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಗೊಂಡ ಮತ್ತು ಈರಣ್ಣ ಪೂಜೇರಿ ಕಾರ್ಯಾಚರಣೆ ನಡೆಸಿದರು.
ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.